ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಓರ್ವ ಅಜ್ಜಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಅಕ್ಟೋಬರ್ 7ರಂದು ಬೆಲ್ಲದಬಾಗೇವಾಡಿಯ ಮನೆಯೊಂದರಲ್ಲಿ 75 ವರ್ಷದ ಮಲ್ಲವ್ವ ಜೀವಪ್ಪ ಕಮತೆ ಎಂಬ ವೃದ್ಧ ಮಹಿಳೆ ಸಾವನ್ನಪ್ಪಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಹುಕ್ಕೇರಿ ಪೊಲೀಸರು ಆರಂಭದಲ್ಲಿ ಅನೈಸರ್ಗಿಕ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಈ ಅಜ್ಜಿಯನ್ನು ಕತ್ತು ಹಿಸುಕಿ ಯಾರೋ ಹತ್ಯೆ ಮಾಡಿದ್ದಾರೆ ಎಂಬುದು ಗೊತ್ತಾಯ್ತು. ತಕ್ಷಣವೇ ಎಚ್ಚೆತ್ತುಕೊಂಡ ಹುಕ್ಕೇರಿ ಪೊಲೀಸರು ಗೋಕಾಕ್ ಡಿಎಸ್‍ಪಿ ಮನೋಜ್‍ಕುಮಾರ್ ನಾಯಿಕ್ ಮಾರ್ಗದರ್ಶನದಲ್ಲಿ ಹುಕ್ಕೇರಿ ಸಿಪಿಐ ಮಹಮ್ಮದ್ ರಫೀಕ್ ತಹಶೀಲ್ದಾರ್, ಸಂಕೇಶ್ವರ ಸಿಪಿಐ ಪ್ರಹ್ಲಾದ ಚೆನ್ನಗಿರಿ ನೇತೃತ್ವದಲ್ಲಿ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಮೃತ ಅಜ್ಜಿಯ ಗಂಡ ತೀರಿಕೊಂಡಿದ್ದರು. ಒಂದು ವರ್ಷದ ಹಿಂದೆ ಮೂರು ಜನ ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳಿಂದ ದೂರವಾಗಿ ಬೆಲ್ಲದ ಬಾಗೇವಾಡಿ ಗ್ರಾಮದ ಕೋಣೆಯಲ್ಲಿ ವಾಸವಿದ್ದರು. ಆ ಮಹಿಳೆಗೆ ಪ್ರತಿದಿನ ಸಾಯಂಕಾಲ ಆಕೆಯ ಮೊಮ್ಮಗ ಬೆಲ್ಲದ ಬಾಗೇವಾಡಿ ಗ್ರಾಮದಿಂದ ನಾಲ್ಕು ಕಿ.ಮೀ. ದೂರದ ಕಡಹಟ್ಟಿ ಗ್ರಾಮದಿಂದ ಬಂದು ಊಟವನ್ನು ಕೊಟ್ಟು ಹೋಗುತ್ತಿದ್ದ. ಅವತ್ತು ಊಟ ಕೊಡಲು ಬಂದಾಗ ಅಜ್ಜಿ ಸಾವನ್ನಪ್ಪಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಅವರು ಮೊದಲೇ ಪ್ರಕರಣದ ತನಿಖೆ ದಾರಿ ತಪ್ಪಿಸುವ ಕೆಲಸವನ್ನು ಆರೋಪಿಗಳು ಮಾಡಿದ್ದರು.
ಜಮೀನು ಪರಭಾರೆ ಮಾಡಲು ತಾಯಿ ಮತ್ತು ಮಕ್ಕಳಿಗೆ ಮನಸ್ತಾಪಗಳು ಇದ್ದವು ಎಂಬ ದುರುದ್ದೇಶ ಗುರಿಯಾಗಿ ಇಟ್ಟುಕೊಂಡು ಮಕ್ಕಳ ಮೇಲೆ ಸಂಶಯ ಬರಲಿ ಎಂಬ ಉದ್ದೇಶದಿಂದ ಮನೆಯಲ್ಲಿದ್ದ ಕಾಗದ ಪತ್ರಗಳ ಬ್ಯಾಗನ್ನು ಮಕ್ಕಳ ಮನೆ ಮುಂದೆ ಇಟ್ಟಿದ್ದರು. ಆದರೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಥಮ ಆರೋಪಿ 7 ವರ್ಷದ ಹಿಂದೆ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಲ್ಲಿಯೂ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಇನ್ನೊಬ್ಬ ಆರೋಪಿ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದವ. ಪ್ರಥಮ ಆರೋಪಿ ಕೊಲೆಯಾದ ಅಜ್ಜಿಯಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದ. ಈ ವೇಳೆ ಹಿರಿಯ ಮಹಿಳೆ ಈತನ ಜೊತೆಗೆ ಜಗಳ ಮಾಡಿ ನನ್ನ ದುಡ್ಡು ನನಗೆ ಕೊಡು ಎಂದು ಒತ್ತಾಯಿಸಿದ್ದರು.
Laxmi News 24×7