ಲಕ್ನೋ: ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆಕೋರ್ಟ್ ಈ ತೀರ್ಪು ಪ್ರಕಟಿಸುವ ಮೂಲಕ 28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.
ತೀರ್ಪು ನೀಡುವ ದಿನದಂದು ಎಲ್ಲ 32 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾ.ಸುರೇಂದ್ರ ಕುಮಾರ್ ಯಾದವ್ ಸೆ.16 ರಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಉಳಿದಂತೆ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್, ಲಾಲು ಸಿಂಗ್, ಬಿಬಿ ಶರಣ್ ಸಿಂಗ್ ಸೇರಿದಂತೆ ಎಲ್ಲ ಆರೋಪಿಗಳು ಕೋರ್ಟ್ ಕೊಠಡಿಯಲ್ಲಿ ಹಾಜರಿದ್ದರು.
ತೀರ್ಪು ಪ್ರಕಟಿಸುವ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತ ಮುತ್ತ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕೋರ್ಟ್ ಇರುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಬದಲಾವಣೆ ಮಾಡಲಾಗಿತ್ತು.
ಸುಪ್ರೀಂ ಸೂಚನೆ ಏನಿತ್ತು?
2017ರ ಏಪ್ರಿಲ್ 19 ಎಂದು ಪ್ರತಿನಿತ್ಯ ವಿಚಾರಣೆ ನಡೆಸಿ 2 ವರ್ಷದ ಒಳಗಡೆ ತೀರ್ಪು ಪ್ರಕಟಿಸುವಂತೆ ಸಿಬಿಐ ವಿಶೇಷ ಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿತ್ತು. ಲಕ್ನೋ ಸಿಬಿಐ ನ್ಯಾಯಾಲಯದಲ್ಲಿ ಕರಸೇವಕರ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ 8 ವಿಐಪಿಗಳ ವಿರುದ್ಧ ರಾಯಬರೇಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2017ರ ಏಪ್ರಿಲ್‌ನಲ್ಲಿ ರಾಯಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಲಕ್ನೋ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ವರ್ಗಾಯಿಸಿತ್ತು.
ಏನಿದು ಪ್ರಕರಣ?
1992 ಡಿಸೆಂಬರ್ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿದೆ. ಆರಂಭಿಕವಾಗಿ 48 ಮಂದಿಯನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಕಾರಣ 48 ಜನ ಆರೋಪಿಗಳ ಪೈಕಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು.