ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸುರ ಗ್ರಾಮದ ಯೋಧನೋರ್ವ 17 ವರ್ಷಗಳ ದೇಶಸೇವೆ ಮಾಡಿ ಸದ್ಯ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಬಳಿಕ ಯೋಧನಿಗೆ ಏನಾದ್ರೂ ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲ. ಸೇನೆಗೆ ಸೇರಬೇಕೆಂಬ ಹಂಬಲವಿರುವ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಕಟ್ಟಡ ಕಟ್ಟಲು ಸ್ಥಳೀಯ ಅಧಿಕಾರಿಗಳು ಹಾಗೂ ಪುಡಿ ರೌಡಿಗಳ ದೌರ್ಜನ್ಯಕ್ಕೆ ಬೇಸತ್ತಿದ್ದಾನೆ.
ಸೇನೆಯಲ್ಲಿ ವೈರಿಗಳಿಗೆ, ನಕ್ಸಲ್‍ಗಳಿಗೆ ಹೆದರದ ಸೈನಿಕ, ಸ್ಥಳೀಯ ಪುಂಡರ ಜೀವ ಬೆದರಿಕೆಗೆ ಬೇಸತ್ತು ಕುಟುಂಬದ ಎಂಟು ಜನ ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೌದು ಈರಣ್ಣ ಅಣ್ಣಿಗೇರಿ ಕುಟುಂಬ ಸದ್ಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಾಸವಿದ್ದಾರೆ. ಈ ಮಾಜಿ ಸೈನಿಕ ತನ್ನ ಕುಟುಂಬದ ಎಂಟು ಜನರು ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಾರಣ ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ 16.ಡ ವ್ಯಾಪ್ತಿಯ ಪ್ಲ್ಯಾಟ್ ನಂಬರ್ 127/197 ಎಂಬುದನ್ನು ಸುಮಾರು 8 ವರ್ಷಗಳ ಹಿಂದೆಯೇ ಖರೀದಿಸಿದ್ದಾರೆ.
ಈ ಜಾಗದಲ್ಲಿ ಮನೆ ಹಾಗೂ ಸೈನ್ಯಕ್ಕೆ ಸೇರಬೇಕೆಂಬ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಗಂಗಾಧರ ಗುಡಗೇರಿ ಹಾಗೂ ಮಂಜುನಾಥ ಮಾಗಡಿ ಎಂಬುವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂಬುದು ಮಾಜಿ ಸೈನಿಕನ ಕುಟುಂಬದ ಆರೋಪವಾಗಿದೆ. ಯಾವುದೇ ಹುರುಳಿಲ್ಲದೇ ಕಟ್ಟಡ ಕಟ್ಟಲು ಅನುಮತಿ ನೀಡದೇ, ಸೈನಿಕನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಇದರಿಂದ ಹಂತಕರ ಕೈಯಲ್ಲಿ ಸಾವನ್ನಪ್ಪುವುದಕ್ಕಿಂತ ಸರ್ಕಾರದ ಎದುರು ಸಾವಿಗೆ ಶರಣಾಗುವುದೇ ಒಳ್ಳೆಯದು ಎಂದು ನೊಂದು ದಯಾಮರಣಕ್ಕೆ ಮುಂದಾಗಿದ್ದೇವೆ ಎಂದು ಮಾಜಿ ಸೈನಿಕ ಹೇಳಿದ್ದಾರೆ.
ಮಾಜಿ ಸೈನಿಕ ಈರಣ್ಣ 17 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ನಾಗಾಲ್ಯಾಂಡ್, ವೆಲ್ಲಿಂಗ್ಟನ್, ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದಾರೆ. ದಯಾಮರಣಕ್ಕೆ ಮಾಜಿ ಸೈನಿಕ 38 ವರ್ಷ ಈರಣ್ಣ ಅವರ ಪತ್ನಿ 32 ವರ್ಷದ ಕವಿತಾ, 3 ವರ್ಷದ ಪ್ರಕೃತಿ ಹಾಗೂ 5 ತಿಂಗಳ ಪ್ರಣಿತ್ ಜೊತೆಗೆ ಮಾಜಿ ಸೈನಿಕನ ಸಹೋದರ ಶಿವಲಿಂಗಪ್ಪ, ಅವರ ಪತ್ನಿ 34 ವರ್ಷದ ಶೋಭಾ, ಮಕ್ಕಳಾದ 13 ವರ್ಷದ ಶಿವಯೋಗಿ, 11 ವರ್ಷದ ಆದಿತ್ಯ ಹೀಗೆ ಒಟ್ಟು 8 ಜನ ದಯಾಮರಣ ಅರ್ಜಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.