ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಬಿಟ್ಟು ಬಿಟ್ಟು ಭಾರೀ ಮಳೆ ಆಗ್ತಿದೆ. ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು.
ಶಿವನಾಂದ ವೃತ್ತದ ರೈಲ್ವೇ ಅಂಡರ್ ಪಾಸ್‍ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಬೈಕ್ ಸವಾರರೊಬ್ರು ದಾರಿ ಗೊತ್ತಾಗದೇ ಕೆಳಗೆ ಬಿದ್ದರು. ಆಟೋವೊಂದು ಕೆಟ್ಟು, ಚಾಲಕ ತಳ್ಳಿಕೊಂಡು ಹೋದರು. ಮಧ್ಯಾಹ್ನದ ಮೂರು ಗಂಟೆಯ ಬಳಿಕ ಬಿಡುವು ನೀಡಿದ ವರುಣರಾಯ ರಾತ್ರಿ ಮತ್ತೆ ಸುರಿಯಲಾರಂಭಿಸಿದನು. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು.
ಮಲ್ಲೇಶ್ವರಂ, ಯಶವಂತಪುರ ಶೇಷಾದ್ರಿಪುರಂ, ಗೋರಗುಂಟೆಪಾಳ್ಯ, ರಾಜಾಜಿನಗರ ಮತ್ತಿಕೆರೆ, ಬಿಇಎಲ್ ಸರ್ಕಲ್, ಸದಶಿವನಗರ, ಸಂಜಯ್ ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಮಳೆ ಆಗುತ್ತಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕೋಡಿಯ ಮಾಂಜರಿ ಗ್ರಾಮದ ನೆರೆ ಸಂತ್ರಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ರು. 527 ಫಲಾನುಭವಿಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ರು. ತಹಶೀಲ್ದಾರ್ ಸುಭಾಷ್ ಮನವೊಲಿಕೆಗೂ ಬಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ.