ಯಾದಗಿರಿ: ಬಂಕ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲು ನೀರು ಹಾಕುತ್ತಿದ್ದು, ಡೀಸೆಲ್ ಹಾಕಿಸಿಕೊಂಡ ವಾಹನಗಳ ಇಂಜಿನ್ ಫುಲ್ ಬ್ಲಾಕ್ ಆಗಿ ಕೆಟ್ಟು ನಿಂತ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ನಾರಾಯಣಪುರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಬದಲಿಗೆ ನೀರು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಸೋಮವಾರ ರಾತ್ರಿ ನಾರಾಯಣಪುರ ಗ್ರಾಮದ ಹನುಮಂತ ಎಂಬವರು ತಮ್ಮ ಟಾಟಾ ಏಸ್ ಗಾಡಿಗೆ ರಾತ್ರಿ ಡೀಸೆಲ್ ಹಾಕಿಸಿದ್ದರು, ವಾಹನ ಸ್ವಲ್ಪ ದೂರ ತೆರಳಿ ಇಂಜಿನ್ ಬ್ಲಾಕ್ ಆಗಿ ವಾಹನ ರಿಪೇರಿಗೆ ಬಂದಿತ್ತು.
ಕೆಲ ಹೊತ್ತಿನ ಬಳಿಕ ಅದೇ ಬಂಕ್ ನಲ್ಲಿ ಡೀಸೆಲ್ ಹಾಕಿಸಿದ ಹನುಮಂತನ ಸ್ನೇಹಿತನ ಗಾಡಿಗೂ ಸಹ ಇದೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಹನುಮಂತ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಬಂಕ್ ಗೆ ತೆರಳಿ ಡೀಸೆಲ್ ಮತ್ತು ಪೆಟ್ರೋಲ್ ಪರೀಕ್ಷೆ ಮಾಡಿದಾಗ, ಅದರಲ್ಲಿ ನೀರು ಬೆರೆತ ಸತ್ಯ ಹೊರಬಿದ್ದಿದೆ.
ಬಂಕ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರು, ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್ ಗೆ ಮಳೆಯ ನೀರು ಬೆರೆತ ಹಿನ್ನೆಲೆಯಲ್ಲಿ ಇಂಧನದೊಳಗೆ ನೀರು ಸೇರಿಕೊಂಡಿರುವ, ನೆಪ ಹೇಳಿ ಬಂಕ್ ಮಾಲೀಕರು ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.