ಹುಬ್ಬಳ್ಳಿ: ಕೊರೊನಾ ನಂತರ ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭದ ವಿಚಾರವಾಗಿ ಶಿಕ್ಷಣ ಸಚಿವರು ಎಲ್ಲ ಶಾಸಕರು, ಸಚಿವರಿಗೆ ಪತ್ರ ಬರೆದು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ವಿಚಾರಕ್ಕೆ ಕೈಗಾರಿಕಾ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗರಂ ಆಗಿದ್ದಾರೆ. ಅಲ್ಲದೆ ಶಾಲೆಗಳ ಆರಂಭ ಮಾಡೋ ವಿಚಾರದಲ್ಲಿ ಪೋಷಕರ ಅಭಿಪ್ರಾಯ ಮುಖ್ಯವಾಗಿದೆ. ನಮ್ಮದಲ್ಲವೆಂದು ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿಯ ನಿವಾಸದಲ್ಲಿಂದು ಮಾತನಾಡಿದ ಶೆಟ್ಟರ್, ಶಾಲೆಗಳ ಆರಂಭದ ಬಗ್ಗೆ ಪಾಲಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಪೋಷಕರಿಗೆ ನಮ್ಮ ಮಕ್ಕಳು ಸುರಕ್ಷಿತ ಎಂಬ ಭಾವನೆ ಬರುವ ತನಕ ಶಾಲೆಗಳನ್ನು ಆರಂಭಿಸೋದು ಬೇಡ. ಶಾಲೆಗಳನ್ನ ತೆರೆಯುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡವಿದೆ. ಬೇಕಿದ್ದರೆ ಕೆಲವು ಶಾಲೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಿ. ಸಾಧಕ-ಬಾಧಕ ನೋಡಿಕೊಂಡು ನಂತರ ಶಾಲೆಗಳನ್ನು ಪ್ರಾರಂಭಿಸಬಹುದು ಎಂದರು.
ಶಾಲೆಗಳ ಆರಂಭ ಮಾಡೋ ವಿಚಾರದಲ್ಲಿ ಪಾಲಕರಲ್ಲಿ ಸದ್ಯಕ್ಕೆ ಭಯದ ವಾತಾವರಣವಿದೆ. ತಕ್ಷಣವೇ ಎಲ್ಲಾ ಶಾಲೆಗಳನ್ನು ಪ್ರಾರಂಭಿಸುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಶಾಲೆಗಳ ಆರಂಭದ ಕುರಿತು ಶಿಕ್ಷಣ ಸಚಿವರು ಬರೆದಿರುವ ಪತ್ರ ನನಗಿನ್ನೂ ತಲುಪಿಲ್ಲ. ಇಷ್ಟು ದಿನ ಶಾಸಕರು, ಸಚಿವರು ಎಲ್ಲರೂ ಅಧಿವೇಶನದಲ್ಲಿ ಇದ್ವಿ, ಅಲ್ಲಿಯೆ ಚರ್ಚಿಸಬಹುದಿತ್ತು. ಅದು ಬಿಟ್ಟು ಪತ್ರ ಬರೆದರೆ ಏನ್ ಹೇಳೋದು..? ಅಂತ ಶಿಕ್ಷಣ ಸಚಿವರ ವಿರುದ್ಧ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.