ಅಥಣಿ (ಬೆಳಗಾವಿ): ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಬಿಳ್ಳೂರ ಗ್ರಾಮದ ಹೊರವಲಯದಲ್ಲಿ ತಾಯಿ ಮತ್ತು ಮೂರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ. ಮೃತ ಮಹಿಳೆ ಬೆಳಗಾವಿ ಮೂಲದವರಾಗಿದ್ದು, ಮಹಾರಾಷ್ಟ್ರ ವ್ಯಕ್ತಿಯನ್ನು ಮದುವೆಯಾಗಿದ್ದರು.
ಮೂರು ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ: ಮೃತಪಟ್ಟವರನ್ನು ತಾಯಿ ಸುನೀತಾ ತುಕಾರಾಮ ಮಾಳಿ (27), ಮಕ್ಕಳಾದ ಅಮೃತಾ ತುಕಾರಾಮ ಮಾಳಿ (13), ಅಂಕಿತ ತುಕಾರಾಮ ಮಾಳಿ (10) ಮತ್ತು ಐಶ್ವರ್ಯ ತುಕಾರಾಮ ಮಾಳಿ (7) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ದಿನದ ಹಿಂದೆ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಜತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಸೋಮವಾರ ದಿನದಂದು ಬಿಳ್ಳೂರ ಗ್ರಾಮದ ಹೊರವಲಯದ ಕೆರೆಯಲ್ಲಿ ನಾಲ್ಕು ಜನರ ಮೃತ ದೇಹಗಳು ತೇಲುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕು.