ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ, ಕಾರಾಗೃಹಗಳ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನಲ್ಲಿರುವ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುತ್ತಿಗೆ ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಹೀಗಾಗಿ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಘಟನೆ ನಡೆದ ಬಳಿಕ ಹೇಮಂತ್ ಕುಮಾರ್ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ಎಂಬಾತ ನಾಪತ್ತೆಯಾಗಿದ್ದು, ಆತನೇ ಈ ಕೊಲೆ ಮಾಡಿರಬಹುದು ಎಂಬ ಅನುಮಾನದ ಮೇರೆಗೆ ಪೊಲೀಸರು ಪತ್ತೆ ಕಾರ್ಯ ನಡೆಸಿದ್ದಾರೆ. ಹೇಮಂತ್ ಕುಮಾರ್ ಲೋಹಿಯಾ ಅವರ ನಿವಾಸದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹೀಗಾಗಿ ತಮ್ಮ ಸ್ನೇಹಿತ ಮುಕೇಶ್ ಸಿಂಗ್ ನಿವಾಸದಲ್ಲಿ ಕುಟುಂಬ ಸಮೇತರಾಗಿ ಕೆಲ ದಿನಗಳಿಂದ ವಾಸಿಸುತ್ತಿದ್ದರು ಎನ್ನಲಾಗಿದೆ.
1992ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಹೇಮಂತ್ ಕುಮಾರ್, ಜಮ್ಮು ಹೊರ ವಲಯದಲ್ಲಿರುವ ತಮ್ಮ ದುರಸ್ತಿ ಕಾರ್ಯ ನಡೆಯುತ್ತಿದ್ದ ನಿವಾಸದಲ್ಲಿ ಸಾವನ್ನಪ್ಪಿದ್ದರು. ಘಟನಾ ಸ್ಥಳದ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಪೊಲೀಸರು ಹೇಮಂತ್ ಕುಮಾರ್ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾಗಿರುವ ಕೆಲಸಗಾರ ಯಾಸಿರ್ ಪತ್ತೆಯಾದ ಬಳಿಕ ಹೆಚ್ಚಿನ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯನ್ನು ಪೊಲೀಸರು ಹೊಂದಿದ್ದಾರೆ.