ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಮೊಟ್ಟೆಯಿಟ್ಟು, ಅದಕ್ಕೆ ದಿನವೂ ಕಾವು ಕೊಟ್ಟು, ನೂರಾರು ಮರಿ ಹುಟ್ಟು ಹಾಕಿ ರಕ್ತಬೀಜಾಸುರರಂತೆ ಬೆಳೆಸಿದೆ. ಅದನ್ನು ಎಷ್ಟೇ ತೊಡೆದು ಹಾಕಲು ಪ್ರಯತ್ನಿಸಿದರೂ ಕಾಂಗ್ರೆಸ್ ಕಸ(ಹುಲ್ಲು)ದಂತೆ ಬೆಳೆಯುತ್ತಿದೆ.
ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್. ಈಗ ನಕಲಿ ಗಾಂಧಿ ಪರಿವಾರ ಈ ಬಗ್ಗೆ ಮಾತನಾಡುತ್ತಿರುವುದೇ ದೊಡ್ಡ ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯತೆ ಇಲ್ಲ. ಸೋನಿಯಾ, ರಾಹುಲ್ ನೇತೃತ್ವದಲ್ಲಿ ಬೋಪೋರ್ಸ್ ಸೇರಿ ಹಳೆಯದು ಹೊರತುಪಡಿಸಿ 2004ರಿಂದ 2014ರವರೆಗೆ ಯುಪಿಎ ಸರ್ಕಾರವಿದ್ದಾಗ ಒಂದು ದಿನವೂ ಹಗರಣವಿಲ್ಲದೆ ಸರ್ಕಾರ ನಡೆದಿಲ್ಲ. ಇಂತಹ ಹಗರಣಗಳಿಂದಲೇ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡಿತು. ವೀಸಾದಲ್ಲೂ ಹಣ ಪಡೆಯುತ್ತಿದ್ದ ಬಗ್ಗೆ ಗಂಭೀರ ಆರೋಪವಿದೆ.
ಜತೆಗೆ 2ಜಿ, ಕಾಮನವೆಲ್ತ್ ಗೇಮ್‌ನಿಂದ ಹಿಡಿದು ಹಲವು ಹಗರಣ ಹಾಗೂ ಇಂದಿಗೂ ಕಲ್ಲಿದ್ದಲು ಹಗರಣ ಕುರಿತ ಸಿಬಿಐ ತನಿಖೆಯ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರಲ್ಲಿ ಹಲವರಿಗೆ ಶಿಕ್ಷೆ ಕೂಡ ಆಗಿದೆ. ಅಂಥವರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಬಹಳ ಆಶ್ಚರ್ಯವಾಗಿದೆ. ಪ್ರಧಾನಿ ಮೋದಿ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಿಲ್ಲ ಎಂದರು.
ರಾಜಸ್ಥಾನ, ಗೋವಾದಲ್ಲಿ ಕಾಂಗ್ರೆಸ್ ತೋಡೊ, ಚೋಡೋ ಆಗುತ್ತಿದೆ. ಕಾರಣ ಕಾಂಗ್ರೆಸ್‌ನವರು ಮೊದಲು ತಮ್ಮ ಪಕ್ಷ ಸರಿಪಡಿಸಿಕೊಳ್ಳಲಿ. ಆನಂತರ ದೇಶದ ಜೋಡಣೆ ಮತ್ತು ಇತರರ ಬಗ್ಗೆ ಮಾತನಾಡಲಿ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಕಾರಣ ರಾಹುಲ್‌ಗೆ ಬರೆದುಕೊಡುವವರು ಸರಿಯಾಗಿ ಬರೆದುಕೊಡಿ. ಜನ ಮೊದಲೇ ಅವರ ಹೇಳಿಕೆ ಗಂಭೀರವಾಗಿ ಪರಿಗಣಿಸಲ್ಲ. ಇಲ್ಲವಾದರೆ ಇನ್ನಷ್ಟು ನಗೆಪಾಟಲಿಗೆ ಒಳಗಾಗುತ್ತಾರೆ ಎಂದರು.