ಚಿಕ್ಕೋಡಿ: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡೋದನ್ನ ಕೇಳಿದ್ದೀವಿ, ನೋಡಿದ್ದೀವಿ. ಅಷ್ಟೆ ಯಾಕೆ ಪಾದಯಾತ್ರೆ ಮೂಲಕ ತಮ್ಮ ಮನೆದೇವರ ಹರಕೆ ತೀರಿಸಿದವರನ್ನೂ ಸಹ ನೋಡಿರ್ತೀವಿ. ಆದರೆ ಇಲ್ಲೊಬ್ಬ ವಿಠ್ಠಲನ ಭಕ್ತ ಲೋಕಕಲ್ಯಾಣಕ್ಕಾಗಿ ಸುಮಾರು 220 ಕಿ.ಮೀ. ಉರುಳು ಸೇವೆ ಮಾಡಿ ಪಂಡರಪುರದ ವಿಠ್ಠಲನ ಕೃಪೆಗೆ ಪಾತ್ರನಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದ ನಿವಾಸಿ ಶಹಾಜೀ ಜಾಧವ್ ಉರುಳು ಸೇವೆ ಸಲ್ಲಿಸಿದ ಭಕ್ತ. ಶಹಾಜೀ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಿಂದ ಮಹಾರಾಷ್ಟ್ರದ ಪಂಡರಪುರದವರೆಗೂ ಉರುಳು ಸೇವೆ ಮಾಡಿದ್ದಾರೆ.
ಕೋವಿಡ್, ನೆರೆ ತೊಲಗಿಸಿ ಇಡೀ ಮನುಕುಲದ ಒಳಿತಿಗಾಗಿ ವಿಠ್ಠಲನ ಬಳಿ ಪ್ರಾರ್ಥಿಸಿ ಶಹಾಜೀ ಹರಕೆ ತೀರಿಸಿದ್ದಾರೆ. ದಿನಕ್ಕೆ ನಾಲ್ಕು ಕಿ.ಮೀ. ಉರುಳು ಸೇವೆ ಮಾಡಿ ಶಹಾಜೀ ಪಂಡರಪುರ ತಲುಪಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ದೇವರು ಮತ್ತು ಭಕ್ತಿ ಎಂಬ ನಂಬಿಕೆಗಳು ಜನರ ಮನಸ್ಸಿನಲ್ಲಿ ಇನ್ನೂ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.