ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಇನ್ನು ಗಣೇಶೋತ್ಸವದ ವೇಳೆ ಕಾನೂನು ಮೀರಿ ವರ್ತಿಸುವವರ ಮೇಲೆ ಕಾನೂನು ರೀತಿಯಲ್ಲಿ ಮಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾದ ಪೂರ್ವಸಿದ್ಧತೆಗಳನ್ನು ವೀಕ್ಷಿಸಲು ಇಂದು ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಎಡಿಜಿಪಿ ಅಲೋಕ್ ಕುಮಾರ್ ರವರು ಬೆಳಗಾವಿಯಲ್ಲಿ ಎಸ್‍ಪಿ ಕಚೇರಿಗೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಪೊಲೀಸ್ ತಂಡದಿಂದ ಗೌರವ ವಂದನೆಯನ್ನು ಸ್ವೀಕಾರ ಮಾಡಿದರು.
ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್‍ರವರು, ಕೋವಿಡ್‍ನಿಂದಾಗಿ ಕಳೆದ ಎರಡು ವರ್ಷಗಳಿಂದಾಗಿ ಗಣೇಶ ಹಬ್ಬದ ಆಚರಣೆಯನ್ನು ಸಂಪೂರ್ಣ ಪ್ರಮಾಣದಲ್ಲಿ ಮಾಡಲಾಗಿಲ್ಲ. ಈ ಬಾರಿ ಕೋವಿಡ್ ಕಡಿಮೆಯಾಗಿದ್ದರಿಂದ ಗಣೇಶ ಹಬ್ಬವನ್ನು ಅತ್ಯಂತ ಅದ್ಧೂರಿಯಿಂದ ಮಾಡಲಾಗುತ್ತಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಅಧಿಕಾರಿಗಳು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬೆಳಗಾವಿಗೆ ರ್ಯಾಪಿಡ್ ಆಕ್ಷನ್ ಫೋರ್ಸ್ ಕೂಡ ಬಂದಿಳಿಯಲಿದೆ. 7 ನೇ ದಿನದಿಂದ ಹಿಡಿದು 11ನೇ ದಿನದ ವರೆಗೆ ಆರ್‍ಎಎಫ್ ತಂಡ ಬೆಳಗಾವಿಯಲ್ಲಿ ಭದ್ರತೆಯನ್ನು ಒದಗಿಸುವ ಕಾರ್ಯ ಮಾಡುತ್ತದೆ. ಈ ವೇಳೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಡ್ರೋಣ್ ಬಳಕೆಯನ್ನು ಮಾಡಲಾಗುತ್ತದೆ. ಮೀಸಲು ಪೊಲೀಸ್ ಹಾಗೂ ಹೋಮ್‍ಗಾರ್ಡ್‍ಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದರು.