ದಾಂಡೇಲಿ: ಜೊಯಿಡಾ ತಾಲ್ಲೂಕಿನ ಪೋಟೊಲಿ ಗ್ರಾಮದ ರೆಸಾರ್ಟ್‌ನಲ್ಲಿ ಗುರುವಾರ ಮಹಿಳೆಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯು ದೈಹಿಕ ಸಂಪರ್ಕಕ್ಕೆ ಅವಕಾಶ ನೀಡದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.
ದಾಂಡೇಲಿ ಗಾಂಧಿನಗರ ಆಶ್ರಯ ಕಾಲೊನಿ ನಿವಾಸಿಗಳಾದ ರವಿಚಂದ್ರ ರಾಜು ರೆಡ್ಡಿ (50) ಹಾಗೂ ವಿಜಯ ಮಹಾದೇವ ಮಾಸಾಳ (30) ಬಂಧಿತರು.
ದಾಂಡೇಲಿ ಗಾಂಧಿನಗರ ನಿವಾಸಿಯಾಗಿದ್ದ ಮೃತ ಸುಶೀಲಾ ದುರ್ಗಪ್ಪ ಬೋವಿವಡ್ಡರ (50), ಆ ರೆಸಾರ್ಟ್‌ನಲ್ಲಿ
ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳಿಬ್ಬರೂ ಅದೇ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು.
ರವಿಚಂದ್ರ ರಾಜು ರೆಡ್ಡಿಯು ಕೊಲೆ ಮಾಡಿದ್ದು, ಮೃತದೇಹವನ್ನು ವಿಜಯ ಮಾಸಾಳ ದಾಂಡೇಲಿಗೆ ತೆಗೆದುಕೊಂಡು ಬಂದಿದ್ದ. ಬಳಿಕ ಮಹಿಳೆಯು ಸ್ವಾಭಾವಿಕವಾಗಿ ಮೃತಪಟ್ಟಿದ್ದಾರೆಂದು ಬಿಂಬಿಸಿ ಸಾಕ್ಷಿ ನಾಶ ಪಡಿಸಲು ಪ್ರಯತ್ನಿಸಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಗಳು ಶೋಭಾ ಭೋವಿವಡ್ಡರ, ಯಾರೋ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ತನಿಖೆ ಆರಂಭಿಸಿದ ಗ್ರಾಮೀಣ ಠಾಣೆಯ ಪೊಲೀಸರು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.