ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರು ಸಿನಿಮಾ ಹೊರತಾಗಿ ಹಲವು ವಿಚಾರಗಳಿಗೆ ಕನ್ನಡಿಗರ ಮನದಲ್ಲಿ ಉಳಿಯುತ್ತಾರೆ. ಈ ಹಿಂದೆ ಕೆರೆಯೊಂದರ ಅಭಿವೃದ್ಧಿ ಮೂಲಕ ದೇಶಕ್ಕೇ ಮಾದರಿಯಾಗಿದ್ದರು ರಾಕಿಂಗ್ ಸ್ಟಾರ್. ಡೆಡ್ಲಿ ಕೊರೊನಾ ವಕ್ಕರಿಸಿದಾಗ ಸಂಕಷ್ಟದಲ್ಲಿದ್ದ ಚಿತ್ರರಂಗದ ಕಾರ್ಮಿಕರಿಗೆ ಸಹಾಯ ಮಾಡಿ ನೆರವಿಗೆ ನಿಂತಿದ್ರು.
ಲಕ್ಷಾಂತರ ರೂಪಾಯಿ ಹಣವನ್ನ ನೇರವಾಗಿ ಅವರವರ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿದ್ದರು. ಇದೀಗ ಮತ್ತದೇ ರೀತಿ ಮಾನವೀಯತೆ ಮೆರೆದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಬಣ್ಣದ ಬದುಕುಬೆಳ್ಳಿತೆರೆಯಮೇಲೆ ಎಷ್ಟು ಸುಂದರವೋ, ತೆರೆಯ ಹಿಂದೆ ಅಷ್ಟೇ ನೋವುಗಳನ್ನ ಹೊಂದಿರುತ್ತದೆ. ಅದರಲ್ಲೂ ಪೋಷಕ ನಟರು ತಮ್ಮ ನಿಜ ಜೀವನದಲ್ಲಿ ಅನುಭವಿಸುವ ಕಷ್ಟಗಳಿಗೆ ಕೊನೆಯೇ ಇರುವುದಿಲ್ಲ. ಹೀಗೆ ಜಗತ್ತಿನಾದ್ಯಂತ ಖ್ಯಾತಿ ಪಡೆದ ಕನ್ನಡದ ಪೋಷಕ ನಟ ಕ್ಯಾನ್ಸರ್ ಚಿಕಿತ್ಸೆಗೆ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ಕೆಜಿಎಫ್’ ಚಾಚಾ ಎಂದೇ ಜಗತ್ತಿನಾದ್ಯಂತ ಹೆಸರು ಪಡೆದಿರುವ ನಟ ಹರೀಶ್ ರಾಯ್ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಇನ್ನು ಈ ವಿಚಾರ ತಿಳಿದ ರಾಕಿ ಭಾಯ್ ನಟ ಹರೀಶ್ ರಾಯ್ ಅವರಿಗೆ ನೆರವಾಗಲು ಮುಂದಾಗಿದ್ದಾರೆ.
ನಾನಿದ್ದೀನಿ ಬಿಡಿ..!
ಒಂದು ರೂಪಾಯಿ ಖರ್ಚು ಮಾಡುವಾಗಲೇ ಹಿಂದೆ, ಮುಂದೆ ನೋಡುವ ಪ್ರಪಂಚ ಇದು. ಅದರಲ್ಲೂ ಸ್ಟಾರ್‌ಗಳುಮತ್ತೊಬ್ಬರಿಗೆ ಧೈರ್ಯ ತುಂಬುವ ಕೆಲಸ ಮಾಡುವುದು ತುಂಬಾ ಕಡಿಮೆ. ಆದರೆ ಕನ್ನಡ ಚಿತ್ರರಂಗದಲ್ಲಿ ಈ ರೀತಿ ದೊಡ್ಡ ಮನಸ್ಸುಗಳಿಗೆ ಕೊರತೆ ಇಲ್ಲ ಬಿಡಿ. ಹಾಗೇ ರಾಕಿಂಗ್ ಸ್ಟಾರ್ ಯಶ್ ಕೂಡ ನಟ ಹರೀಶ್ ರಾಯ್ ಕ್ಯಾನ್ಸರ್ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದಾರಂತೆ. ಹರೀಶ್ ರಾಯ್‌ಗೆ ಕ್ಯಾನ್ಸರ್ ಇರುವ ವಿಚಾರವನ್ನ ತಿಳಿದುಕೊಂಡ ರಾಕಿಭಾಯ್ ಮಧ್ಯರಾತ್ರಿ ಕರೆ ಮಾಡಿದ್ದರಂತೆ. ನಾವಿದ್ದೀವಿ ಧೈರ್ಯವಾಗಿರಿ ಎಂದಿದ್ದಾರೆ. ಅಲ್ಲದೆ ಚಿಕಿತ್ಸೆಗೆ ನೆರವಾಗುವ ಭರವಸೆಯನ್ನ ನೀಡಿದಾರಂತೆ.
ಹಲವು ದಶಕಗಳ ಸೇವೆ
ಅಂದಹಾಗೆ ‘ಕೆಜಿಎಫ್’ ಚಾಚಾ ನಟ ಹರೀಶ್ ರಾಯ್ ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು ಶುರುಮಾಡಿದ್ದು ಇಂದು ಅಥವಾ ನಿನ್ನೆಯಲ್ಲ. ಸುಮಾರು 3 ದಶಕ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ ನಟ ಹರೀಶ್ ರಾಯ್. ಚಂದನವನ ಹರೀಶ್ ರಾಯ್ ಅವರ ನಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಹರೀಶ್ ರಾಯ್ ನಟನೆ ಹಿಟ್ ಆಗಿತ್ತು. ಹೀಗೆ 4 ವರ್ಷಗಳ ಹಿಂದೆ ರಿಲೀಸ್ ಆದ ‘ಕೆಜಿಎಫ್’ ಸಿನಿಮಾ ಹರೀಶ್ ರಾಯ್ ಅವರಿಗೆ ವರ್ಲ್ಡ್ ಲೆವೆಲ್ ನೇಮ್ ತಂದುಕೊಟ್ಟಿತ್ತು. ಹೀಗೆ ನಟನೆಗಾಗಿ ಜೀವನ ಮುಡಿಪಿಟ್ಟ ನಟನ ಬಾಳಲ್ಲಿ ವಿಧಿಯಾಟ ಶುರುವಾಗಿದೆ.
ಕಣ್ಣೀರಿನ ಕಥೆ
ಖಾಸಗಿ ಸಂದರ್ಶನ ಒಂದರಲ್ಲಿ ಇದೇ ಮೊದಲ ಬಾರಿಗೆ ತಮ್ಮ ಸಂಕಷ್ಟದ ಸ್ಥಿತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ನಟ ಹರೀಶ್ ರಾಯ್. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹರೀಶ್ ರಾಯ್ ಅಲಿಯಾಸ್ ‘ಕೆಜಿಎಫ್’ ಚಾಚಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೀಗಾಗಿ ಅವರಿಗೆ ನೆರವಿನ ಅಗತ್ಯತೆ ಇದೆಯಂತೆ. ಸಂಕೋಚ ಸ್ವಭಾವದ ‘ಕೆಜಿಎಫ್‘ ಚಾಚಾ ಎಲ್ಲಿಯೂ ತಮ್ಮ ಥೈರಾಯ್ಡ್ ಕ್ಯಾನ್ಸರ್ ಸಮಸ್ಯೆ ಬಗ್ಗೆ ಹೇಳಿರಲಿಲ್ಲವಂತೆ. ಆದರೆ ಅನಿವಾರ್ಯವಾಗಿ ತಮ್ಮ ಕಣ್ಣೀರಿನ ಕಥೆ ಬಿಚ್ಚಿಟ್ಟಿದ್ದಾರೆ ಹರೀಶ್ ರಾಯ್. ಥೈರಾಯ್ಡ್ ಕ್ಯಾನ್ಸರ್ ಸರ್ಜರಿ ನಂತರ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಚಿಕಿತ್ಸೆ ಪಡೆಯಲು ಕನ್ನಡದ ಹೆಮ್ಮೆಯ ನಟನಿಗೆ ಕನ್ನಡಿಗರ ಸಹಾಯ ಅಗತ್ಯವಾಗಿದೆ.
ಹರೀಶ್ ರಾಯ್ ಅವರಿಗೆ ಸಹಾಯ ಮಾಡಲು +91 96069-60656 ಸಂಖ್ಯೆ ಮೂಲಕ ಆನ್‌ಲೈನ್ ಟ್ರಾನ್ಸ್‌ಫರ್ ಮಾಡಬಹುದು. ಬದುಕಿನ ಉದ್ದಕ್ಕೂ ಬಣ್ಣದ ಲೋಕಕ್ಕಾಗಿ ಸೇವೆ ಸಲ್ಲಿಸಿ, ಬಣ್ಣದ ಲೋಕಕ್ಕಾಗಿಯೇ ಬದುಕಿರುವ ನಟನ ಜೀವನಕ್ಕೆ ನೆರವಾಗಿ ನಿಲ್ಲಬೇಕಿದೆ. ಕಷ್ಟದ ಸಮಯದಲ್ಲಿ ಕನ್ನಡಿಗರು ಕನ್ನಡದ ನಟನ ಬೆಂಬಲಕ್ಕೆ ನಿಂತರೆ ಅದೇ ಪುಣ್ಯದ ಕೆಲಸವಾಗಲಿದೆ.