ಬೆಳಗಾವಿ: ಬಾಲ್ಯದ ಗೆಳೆಯರಾಗಿದ್ದ ಇಬ್ಬರೂ ಡಿಗ್ರಿವರೆಗೂ ಒಂದೇ ಕಡೆಗೆ ಓದಿ ರಾಜಕಾರಣದ ಗುಂಗಿನಲ್ಲಿ ಕಮಲ ಅರಳಿಸಲು ನಾ ಮೇಲೆ, ನೀ ಮೇಲೆ ಎಂಬ ಪ್ರತಿಷ್ಠೆಯಲ್ಲಿ ದ್ವೇಷ ಸಾಧಿಸಿಕೊಂಡು ಕೊನೆಗೆ ಕೊಲೆಯಲ್ಲಿ ಗೆಳೆತನ ಜತೆಗೆ ರಾಜಕಾರಣದ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿಕೊಂಡಿದ್ದಾರೆ.
ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದ ಪರಶುರಾಮ ಹಲಕರ್ಣಿ(32) ಎಂಬ ಯುವಕ ಕೊಲೆಗೀಡಾಗಿದ್ದಾನೆ. ಇದೇ ಗ್ರಾಮದ ಮೂವರು ಪರಶುರಾಮನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಮುಖ ಆರೋಪಿ ಬಸವರಾಜ(ರಾಜು) ಭರಮಪ್ಪ ಗಲಾಟಿ ಎಂಬಾತ ಪರಾರಿಯಾಗಿದ್ದಾನೆ. ಏಳು ಜನರ ವಿರುದ್ಧ ದೂರು ದಾಖಲಾಗಿದೆ.
ಹಿಡಕಲ್ ಡ್ಯಾಂ ಗ್ರಾಮದ ಪರಶುರಾಮ ಹಾಗೂ ಬಸವರಾಜ ಇಬ್ಬರೂ ಕ್ಲಾಸ್‌ಮೇಟ್‌ಗಳು. ದೊಡ್ಡವರಾದಂತೆ ರಾಜಕೀಯಕ್ಕೆ ಧುಮುಕಿದರು. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇಬ್ಬರೂ ಕಟ್ಟಾ ಕಾರ್ಯಕರ್ತರಾಗಿದ್ದರು. ಮರಿ ಪುಢಾರಿಗಳಾಗಿ ಗ್ರಾಮದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ರಾಜಕಾರಣದಲ್ಲಿ ಬೆಳೆಯುವ ಧಾವಂತ ಇಬ್ಬರಿಗೂ ಇತ್ತು. ಇದೇ ಧಾವಂತ ಇಬ್ಬರ ದ್ವೇಷಕ್ಕೂ ಕಾರಣವಾಯಿತು.
ಅನೇಕ ವರ್ಷಗಳಿಂದ ರಾಜಕೀಯ ಮಾಡುತ್ತಲೇ ಇಬ್ಬರೂ ಒಂದೇ ಪಕ್ಷದಲ್ಲಿ ಇದ್ದರೂ ಜಗಳ ಇತ್ತು. ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಪ್ರತ್ಯೇಕವಾಗಿಯೇ ಮಾಡುತ್ತಿದ್ದರು. ಒಬ್ಬ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡು ವಾಟ್ಸ್‌ಆಯಪ್ ಸ್ಟೇಟಸ್ ಇಟ್ಟರೆ, ಮರುದಿನ ಮತ್ತೂಬ್ಬ ಅದೇ ನಾಯಕನಿಗೆ ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಇಬ್ಬರಿಗೂ ರಾಜಕೀಯ ಪ್ರತಿಷ್ಠೆ ವಿಷಯವಾಗಿತ್ತು.
ಠಾಣೆ ಮೆಟ್ಟಿಲೇರಿದ್ದರು: ರಾಜಕೀಯಲ್ಲಿ ಬೆಳೆಯಬೇಕೆಂಬ ಹಂಬಲದಲ್ಲಿ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದರು. ತಾಪಂ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ತಯಾರಿ ಮಾಡಿಕೊಂಡಿದ್ದರು. ಈ ದ್ವೇಷ ಹೆಚ್ಚಾಗಿ ಬೆಳೆಯತೊಡಗಿತು. ಕಳೆದ ಜೂನ್‌ನಲ್ಲಿ ಬಸವರಾಜ ಗಲಾಟಿ ವಿವಾಹ ವಾರ್ಷಿಕೋತ್ಸವ ಸಮಾರಂಭ ವೇಳೆ ಭೋಜನ ಕಾರ್ಯಕ್ರಮ ಇತ್ತು. ಈ ವೇಳೆ ಬಸವರಾಜ ಮತ್ತು ಪರಶುರಾಮನ ಮಧ್ಯೆ ಗಲಾಟೆ ಆಗಿತ್ತು. ಈ ಕುರಿತು ಯಮಕನಮರಡಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು.
ಈ ಗಲಾಟೆ ಬಗೆಹರಿಸಿ ಇಬ್ಬರ ಮಧ್ಯೆ ಒಪ್ಪಂದ ಮಾಡಬೇಕೆಂದು ಗೆಳೆಯರು ಹಾಗೂ ಹಿರಿಯರು ಮಾತುಕತೆ ನಡೆಸುತ್ತಿದ್ದರು. ದ್ವೇಷ ದೂರ ಮಾಡಿ ಇಬ್ಬರನ್ನೂ ಒಂದು ಮಾಡಲು ಹಲವರು ಚರ್ಚೆ ನಡೆಸಿದ್ದರು. ಈ ಮಾತುಕತೆ ನಡೆಯುತ್ತಿದ್ದ ವೇಳೆಯೇ ಪರಶುರಾಮ ಹಲಕರ್ಣಿಯ ಕೊಲೆ ಆಗಿದ್ದು ದುರಂತ.
ಪ್ರತಿ ಶನಿವಾರ ಹನುಮಂತ ದೇವರ ದರ್ಶನಕ್ಕೆ ಹೋಗುತ್ತಿದ್ದ ಪರಶುರಾಮ
ಪ್ರತಿ ಶನಿವಾರ ಪರಶುರಾಮ ಹಲಕರ್ಣಿ ಹನುಮಂತ ದೇವರ ದರ್ಶನಕ್ಕೆ ಹೋಗುತ್ತಿದ್ದ. ದರ್ಶನ ಪಡೆಯಲು ಈ ದಿನ ತಪ್ಪಿಸುತ್ತಿರಲಿಲ್ಲ. ಶನಿವಾರ ದರ್ಶನಕ್ಕೆ ಹೋಗಿದ್ದನ್ನೇ ಸಮಯ ಸಾ ಧಿಸಿಕೊಂಡ ದುಷ್ಕರ್ಮಿಗಳು ಪರಶುರಾಮ ದ್ವಿಚಕ್ರ ವಾಹನದ ಮೇಲೆ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆಸಿ ತಡೆದಿದ್ದಾರೆ. ಕಾರಿನಡಿ ಸಿಲುಕಿಕೊಂಡ ಬೈಕ್ ಮೇಲೆತ್ತಲಾಗದೆ ಒದ್ದಾಡುತ್ತಿದ್ದ ಪರುಶರಾಮನ ಮೇಲೆ ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಕೈ ಮುಗಿದು ಬೇಡಿಕೊಂಡರೂ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದು ನಂತರ ಕೂಗು ಹಾಕಿ ಅಲ್ಲಿಂದ ಓಡಿ ಹೋಗಿದ್ದಾರೆ. ಸಮೀಪದಲ್ಲಿದ್ದ ಶಾಲಾ ಮಕ್ಕಳು ಇದನ್ನು ನೋಡಿ ಆತಂಕಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶಾಂತವಾಗಿದ್ದ ಹಿಡಕಲ್ ಡ್ಯಾಂ ಅಶಾಂತಗೊಳಿಸಿದ ದುರುಳರು
ಶಾಂತವಾಗಿರುವ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನಲ್ಲಿ ಕೊಲೆ ಪ್ರಕರಣಗಳೇ ನಡೆದಿರಲಿಲ್ಲ. ಸುಮಾರು 40 ವರ್ಷಗಳ ಹಿಂದೆ ಕೊಲೆ ನಡೆದಿದ್ದು ಬಿಟ್ಟರೆ ಈವರೆಗೆ ಯಾವುದೇ ಕೊಲೆ ನಡೆದಿರಲಿಲ್ಲ. ಆದರೆ ಈಗ ರಾಜಕೀಯ ದ್ವೇಷ ಇಟ್ಟುಕೊಂಡು ಪ್ರತಿಷ್ಠೆಗಾಗಿ ಹತ್ಯೆ ಆಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಮನೆ ಮಾಡಿದೆ. ಗ್ರಾಮದಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.