ವಿಜಯಪುರ/ಬೆಂ.ಗ್ರಾಮಾಂತರ: ಸಾರ್, ಕೊಳವೆಬಾವಿಗಳಲ್ಲಿ ಕೇಬಲ್ ಕದಿಯುತ್ತಿದ್ದ ಕಳ್ಳರನ್ನು ಹಿಡಿದಿದ್ದೀವಿ ಬೇಗ ಬನ್ನಿ ಎಂದು ಕರೆ ಮಾಡಿದವರಿಗೆ ನಾವು ಬಿಜಿ ಇದ್ದೀವ್‌ರೀ..ನೀವೆ ಅವರನ್ನು ಠಾಣೆಗೆ ಕರೆದುಕೊಂಡು ಬನ್ನಿ ಎಂದು ಪೊಲೀಸರು ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಆಡಿಯೋ ಪೊಲೀಸರ ವೈಖರಿಯನ್ನು ಅಣುಕ ಮಾಡಿದೆ. ಕಳ್ಳರನ್ನು ಹಿಡಿದವರೇ ಠಾಣೆಗೆ ಕರೆತನ್ನಿ ಎಂದ ಪೊಲೀಸಪ್ಪ ಅಮಾನತು ಶಿಕ್ಷೆಗೂ ಗುರಿಯಾಗಿದ್ದಾರೆ.
ಏನಿದು ಪ್ರಕರಣ?: ಆವತಿ ಗ್ರಾಪಂ ವ್ಯಾಪ್ತಿಯ ಎಂಬ್ರಹಳ್ಳಿ ಗ್ರಾಮದ ಸುತ್ತಮುತ್ತಲಿನ ತೋಟಗಳಲ್ಲಿ ರಾತ್ರಿ ವೇಳೆ ಕೊಳವೆಬಾವಿಗಳಲ್ಲಿನ ಕೇಬಲ್‌ಗಳು ಕಳವಾಗುತ್ತಿದ್ದವು. ಈ ಬಗ್ಗೆ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಕದೀಮರು ಸಿಕ್ಕಿಬಿದ್ದಿರಲಿಲ್ಲ. ಗ್ರಾಮಸ್ಥರೇ ಸೇರಿ ಕಳ್ಳರನ್ನು ಸೆರೆಹಿಡಿಯಲು ರಾತ್ರಿ ವೇಳೆ ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ ಬುಧವಾರ ತಡರಾತ್ರಿ ಕೇಬಲ್ ಕಳವಿಗೆ ಬಂದಿದ್ದ ಕಳ್ಳನೊಬ್ಬ ರೈತರಿಗೆ ಸಿಕ್ಕಿಬಿದ್ದಿದ್ದ.
ಕೂಡಲೇ ವಿಜಯಪುರ ಠಾಣೆಗೆ ಕರೆ ಮಾಡಿದ ರೈತರು ಕಳ್ಳನನ್ನು ಹಿಡಿದಿರುವುದಾಗಿ ತಿಳಿಸಿ ಠಾಣೆಗೆ ಕರೆದೊಯ್ಯವಂತೆ ಮನವಿ ಮಾಡಿದ್ದರು. ಆದರೆ ಅತ್ತ ಕಡೆಯಿಂದ ಮಾತನಾಡಿದ ಕಾನ್ಸ್‌ಟೇಬಲ್ ನಾವು ಬಿಜಿ ಇದ್ದೀವಿ ನೀವೆ ಅವನನ್ನು ಕರೆದುಕೊಂಡು ಬನ್ನಿ ಎಂದು ಕರೆ ಕಟ್ ಮಾಡಿದ್ದರು.
ಪೊಲೀಸರು ಬಂದರು, ಹೋದರು: ಪೊಲೀಸರ ನಿರ್ಲಕ್ಷ್ಯ ಮಾತಿಗೆ ಬೇಸತ್ತ ರೈತರು 112 ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕರೆ ಮಾಡಿದ ಕೆಲವೇ ಕ್ಷಣದಲ್ಲಿ ಬಂದ ವಿಶ್ವನಾಥಪುರ ಠಾಣೆ ಪೊಲೀಸರು ಇದು ನಮ್ಮ ಲಿಮಿಟ್ ಅಲ್ಲ, ಇವನನ್ನು ವಿಜಯಪುರ ಠಾಣೆಗೆ ನೀವೆ ಕರೆದುಕೊಂಡು ಹೋಗಿ ಎಂದು ಆದೇಶಿಸಿ ಕಳ್ಳನನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ. ಕಳ್ಳನನ್ನು ಹಿಡಿದಿದ್ದಲ್ಲದೆ ನಾವೇ ಕರೆದುಕೊಂಡು ಹೋಗಬೇಕಾ ಎಂಬ ಗ್ರಾಮಸ್ಥರ ಪ್ರಶ್ನೆಗೆ ಖಾಕಿ ಧಿಮಾಕಿನಲ್ಲಿ ಉತ್ತರಿಸಿದ ಪೊಲೀಸರು ವಾಹನ ಏರಿ ಹೊರಟು ಹೋಗಿದ್ದಾರೆ. ಪೊಲೀಸರ ವರ್ತನೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.