ಶಿವಮೊಗ್ಗ: ಕನ್ನಡದ ನಡ (ಸೊಂಟ) ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ನಾವು ಭಾಷಾಂಧರೂ ಅಂದರೂ ಸರಿ ಈ ನಡೆಯ ವಿರುದ್ಧ ತಮಿಳರನ್ನು ಅನುಸರಿಸಿ ಹೋರಾಟ ಸಂಘಟಿಸಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಠ್ಯಕ್ರಮ ಪರಿಷ್ಕರಣೆ ಹಾಗೂ ರಾಷ್ಟ್ರಕವಿ ಕುವೆಂಪುಗೆ ಅಪಮಾನ ಖಂಡಿಸಿ ಬುಧವಾರ ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿಗೆ ಆರಂಭವಾದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅವರ ಭಾಷೆಗೆ ಕೊಂಚ ಯಡವಟ್ಟಾದರೂ ಸರಿ ಆಳುವವರು, ವಿರೋಧದವರು ಎಲ್ಲ ಒಟ್ಟಾಗಿ ಸೇರಿಬಿಡುತ್ತಾರೆ.
ಇಲ್ಲಿಯೂ ನಮಗೆ ಈಗ ಪಕ್ಷ ಇಲ್ಲ. ಕವಿ ಪಕ್ಷ, ಕನ್ನಡ ಪಕ್ಷದ ಹೋರಾಟದ ಹಾದಿ ಇಲ್ಲಿಂದಲೇ ಶುರುವಾಗಿದೆ ಎಂದರು.
ಬಸವ ಅಂದರೆ ಕನ್ನಡ. ಕುವೆಂಪು ಅಂದರೆ ಕನ್ನಡ. ಬಸವ ಅಂದರೆ ಕರುನಾಡು. ಕುವೆಂಪು ಅಂದರೆ ಕರ್ನಾಟಕ. ಈ ಎರಡಕ್ಕೂ ಅಪಮಾನ ಆದ ಮೇಲೆ ನಾವು ಇಲ್ಲಿದ್ದು ಏನು ಮಾಡುವುದು ಎಂದು ಪ್ರಶ್ನಿಸಿದ ಹಂಸಲೇಖ, ಅವತ್ತು ಗೋಕಾಕ್ ಚಳವಳಿ. ಇವತ್ತು ಕುಪ್ಪಳ್ಳಿ ಕಹಳೆ. ಇದು ನಾಡಿನಾದ್ಯಂತ ಮೊಳಗಲಿದೆ ಎಂದರು.