ಬೆಳಗಾವಿ: ‘ಕಾಂಗ್ರೆಸ್ ಪಕ್ಷದವರಿಗೆ ಚಡ್ಡಿ ಸುಡುವುದರಿಂದ ಅಷ್ಟು ಖುಷಿಯಾಗುವುದಾದರೆ ನನ್ನ ಚಡ್ಡಿಗಳನ್ನೂ ಕಳುಹಿಸಿಕೊಡುತ್ತೇನೆ. ಅವುಗಳನ್ನೂ ಸುಟ್ಟು ಸಮಾಧಾನ ಮಾಡಿಕೊಳ್ಳಲಿ’ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
‘ಹಿಂದೆ ದೇಶ ಆಳಿ, ಅಧಿಕಾರ ಅನುಭವಿಸಿದ ಕಾಂಗ್ರೆಸ್ಸಿಗರಿಗೆ ಈಗ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ. ಈ ಮಾನಸಿಕ ಒತ್ತಡದಿಂದ ಹೊರಬರಲು ಚಡ್ಡಿ ಸುಡುವಂಥ ಕೆಲಸ ಮಾಡುತ್ತಿದ್ದಾರೆ. ಸುಟ್ಟರೆ ಸುಡಲಿ ಬಿಡಿ’ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದರು.
‘ಆರ್‌ಎಸ್‌ಎಸ್ ದೇಶಭಕ್ತರ ಸಂಘಟನೆ. ನಮಗೆ ನಿರಂತರ ಮಾರ್ಗದರ್ಶನ ಮಾಡಿ ಬೆಳೆಸಿದೆ. ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಯೋಗ್ಯತೆ ಕಾಂಗ್ರೆಸ್‌ಗೆ ಇಲ್ಲ. ಸೂರ್ಯನಿಗೆ ಉಗುಳಲು ಹೋದರೆ ನಮ್ಮ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರು ಯುವಕರು. ಯುವಕರನ್ನು ಗೆಲ್ಲಿಸುವುದು ಬಿಜೆಪಿ ಗುರಿ. ಕಾಂಗ್ರೆಸ್ ಅಭ್ಯರ್ಥಿಗೆ ವಯಸ್ಸಾಗಿದೆ. ಹಾಗಾಗಿ, ಪ್ರಚಾರಕ್ಕೆ ಹೋದಲ್ಲೆಲ್ಲ ಬಿಜೆಪಿ ಪರ ಬೆಂಬಲ ವ್ಯಕ್ತವಾಗಿದೆ’ ಎಂದೂ ಹೇಳಿದರು.
Laxmi News 24×7