ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಲು, ಕೋಮು ಸಂಘರ್ಷ ಹಾಗೂ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣ ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ಎಸ್ಪಿಗಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೊಸ ಟಾಸ್ಕ್ ನೀಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಆಯಾ ಎಸ್ಪಿ ಮಾಹಿತಿ ತಿಳಿದುಕೊಂಡಿರಬೇಕು. ಗಂಭೀರ ಅಪರಾಧ ಕೃತ್ಯಗಳು ನಡೆದಾಗ ಕಡ್ಡಾಯವಾಗಿ ಸ್ಥಳಕ್ಕೆ ಹೋಗಬೇಕು. ಅಹಿತಕರ ಘಟನೆ ನಡೆದಾಗ ಸ್ಥಳಕ್ಕೆ ಮಾರ್ಕ್ ಮಾಡಿಸಿ ತ್ವರಿತಗತಿಯಲ್ಲಿ ಪ್ರಕರಣ ಬೇಧಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಲಾಂಡ್ ಆರ್ಡರ್ ಕಾಪಾಡುವ ಜವಾಬ್ದಾರಿ ಅಲೋಕ್ ಕುಮಾರ್ ಅವರ ಮೇಲಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಹಂತ – ಹಂತವಾಗಿ ಜಿಲ್ಲಾ ಎಸ್ಪಿಗಳೊಂದಿಗೆ ವರ್ಚುಯಲ್ ಸಭೆ ನಡೆಸುತ್ತಿದ್ದಾರೆ. ಇನ್ನೂ ಸೂಕ್ಷ್ಮ ಪ್ರದೇಶ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಎಸ್ಪಿಗಳೊಂದಿಗೆ ಸಭೆ ನಡೆಸಿದ್ದಾರೆ.
ಅಹಿತಕರ ಘಟನೆ ನಡೆದಾಗ ಎಸ್ಪಿ ಕಡ್ಡಾಯ ಭೇಟಿ.. ಜಿಲ್ಲಾ ವ್ಯಾಪ್ತಿಯಲ್ಲಿ ಕೊಲೆ ಸೇರಿದಂತೆ ಗಂಭೀರ ಅಪರಾಧ ನಡೆದಾಗ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ದಾಖಲಾಗುವ ಎಫ್‌ಐಆರ್ ಬಗ್ಗೆ ತಿಳಿದುಕೊಂಡಿರಬೇಕು. ತುರ್ತು ಸಂದರ್ಭ ಹೊರತುಪಡಿಸಿ ನಿತ್ಯ ಎಸ್ಪಿ ಕಚೇರಿಗೆ ಬರಬೇಕು. ಲ್ಯಾಂಡ್ ಲೈನ್ ಮೂಲಕವೇ ಕರೆ ಮಾಡಲು ಆದ್ಯತೆ ನೀಡಬೇಕು. ನಿಯಮ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.