ಬೆಂಗಳೂರು: ರಾಜ್ಯಸಭಾ ಚುನಾವಣೆಯ ಕಣದಿಂದ ಎರಡನೇ ಅಭ್ಯರ್ಥಿಯನ್ನು ವಾಪಾಸ್ ಪಡೆಯುವುದು ಬೇಡ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಹೈಕಮಾಂಡ್ ಗೆ ಸ್ಪಷ್ಟಪಡಿಸಿದ್ದು, ಜೆಡಿಎಸ್ ಗೆ ತೀವ್ರ ಹಿನ್ನಡೆಯಾಗಿದೆ.
ದೇವನಹಳ್ಳಿ ಸಮೀಪ ನವ ಸಂಕಲ್ಪ ಸಭೆಯ ವೇಳೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಈ ಸಂಬಂಧ ಇಪ್ಪತ್ತು ನಿಮಿಷಗಳ ಕಾಲ ಚರ್ಚೆ ನಡೆಸಿ ನಿರ್ಧಾರಕ್ಕೆ ಬಂದಿದ್ದಾರೆ.
ಅನಂತರ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣದಲ್ಲಿ ಉಳಿಯಬೇಕು ಎಂಬುದು ತಮ್ಮಿಬ್ಬರ ಒಗ್ಗಟ್ಟಿನ ನಿಲುವು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಯುವಂತೆ ಮಾಡಿದ್ದ ಸಿದ್ದರಾಮಯ್ಯ ಅವರು ಜೆಡಿಎಸ್ ಅಭ್ಯರ್ಥಿಗೆ ಗೆಲುವಿನ ಅವಕಾಶವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು.
ಖುದ್ದು ದೇವೇಗೌಡರು ತಮ್ಮ ಅಭ್ಯರ್ಥಿ ಉಳಿವಿಗಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಹೈಕಮಾಂಡ್ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಸಿದ್ದರಾಮಯ್ಯ ದಾಳದ ಮುಂದೆ ದೇವೇಗೌಡರ ಲೆಕ್ಕಾಚಾರ ಯಶಸ್ವಿಯಾಗಿಲ್ಲ.