ಬೆಂಗಳೂರು : ಪಿಎಸ್ ಐ ನೇಮಕಾತಿಯಲ್ಲಿ ಭಾರೀ ಅಕ್ರಮಗಳು ಹೊರಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಮೇ. 21, 22 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಭಾರೀ ಕಟ್ಟೆಚ್ಚರ ಮತ್ತು ಕಟ್ಟುನಿಟ್ಟಾಗಿ ನಡೆಸಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮೊದಲೇ ಹಾಜರಿರಬೇಕಾಗುತ್ತದೆ. ಪ್ರತಿ ಅಭ್ಯರ್ಥಿಯನ್ನೂ ಪರೀಕ್ಷಾ ಕೇಂಧ್ರದಲ್ಲಿ ಎರಡು ಹಂತದ ತಪಾಸಣೆ ಮಾಡಲಾಗುತ್ತದೆ. ಪರೀಕ್ಷಾ ಕೇಂಧ್ರ ಪ್ರವೇಶಿಸುವಾಗ ಹೊರಭಾಗದಲ್ಲಿ ಪೊಲೀಸರು ಹಾಗೂ ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಕೊಠಡಿ ಮೇಲ್ವಿಚಾರಕರು ತಪಾಸಣೆ ನಡೆಸಲಿದ್ದಾರೆ.
ಮೇ. 21 ಮತ್ತು 22 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಅರ್ಜಿ ಸಲ್ಲಿಸಿದವರ ಪೈಕಿ ಸಿಂಧುವಾದ ಅರ್ಜಿದಾರು ಪರೀಕ್ಷೆ ಬರೆಯುವರು. ಈ ಸಿಇಟಿಯಲ್ಲಿ ಮೂರು ಪ್ರಶ್ನೆ ಪತ್ರಿಕೆಗಳಿವೆ. ಪತ್ರಿಕೆ-1 ರಲ್ಲಿ ಬಹು ಆಯ್ಕೆ ಮಾದರಿ ಇರಲಿದ್ದು, 150 ಅಂಕಗಳದ್ದಾಗಿದೆ. ಪತ್ರಿಕೆ-2 ಸಾಮಾನ್ಯ ಜ್ಞಾನ ಒಳಗೊಂಡಿರುತ್ತದೆ. 150 ಅಂಕಗಳದ್ದಾಗಿದೆ. 50 ಅಂಕಗಳಿಗೆ ಬಹುಆಯ್ಕೆ ಮತ್ತು 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಯಲ್ಲಿ ಕನಿಷ್ಠ ಶೇ. 45 ಪಡೆಯುವುದು ಕಡ್ಡಾಯ.
ಪತ್ರಿಕೆ-3 ರಲ್ಲಿ ಭಾಷಾ ಪತ್ರಿಕೆಯಾಗಿದ್ದು, ಗರಿಷ್ಟ 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಆಯ್ಕೆ ಅರ್ಹತೆಗೆ ಈ ಪತ್ರಿಕೆಯಲ್ಲಿ ಅಭ್ಯರ್ಥಿ ಶೇ. 50 ಅಂಕ ಪಡೆಯುವುದು ಕಡ್ಡಾಯವಾಗಿದೆ.
ರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಝರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ಅಲ್ಲದೇ ಪರೀಕ್ಷಾರ್ಥಿಗಳು ಯಾವುದೇ ತರಹದ ಮೊಬೈಲ್, ಬ್ಲೂಟೂತ್, ರಿಷ್ಟ ವಾಚ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.