ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಆಗಾಗ ಜೋರಾಗಿ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಗುರುವಾರ ರಾತ್ರಿಯಿಂದಲೂ ವರ್ಷಧಾರೆ ಮುಂದುವರಿದಿದೆ. ಮೂಡಲಗಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಪರಿಣಾಮ, ಮೂಡಲಗಿ- ಸುಣದೋಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಕೆಳಹಂತದ ಸೇತುವೆ ಇದಾಗಿದ್ದು, ಅದರ ಮೇಲೆಯೇ ಅಪಾಯ ಲೆಕ್ಕಿಸದೆ ಜನರು ಸಂಚರಿಸುತ್ತಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ತೀರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ತಡರಾತ್ರಿ ಮಳೆಯಿಂದಾಗಿ ಮುಗಳಖೋಡದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮೋಹನ ಲಮಾಣಿ ಎನ್ನುವವರ ಸೃಷ್ಟಿ ಸ್ವೀಟ್ ಮಾರ್ಟ್ ಅಂಗಡಿಗೆ ನೀರು ನುಗ್ತಿತ್ತು. ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸದಿದ್ದಕ್ಕೆ ಪುರಸಭೆ ಅಧಿಕಾರಿಗಳ ವಿರುದ್ಧ ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಕೊಣ್ಣೂರು-ಘೋಡಗೇರಿ ರಸ್ತೆ ಕಾಲುವೆಯಂತಾಗಿತ್ತು. ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿದ್ದರಿಂದ ಅವಾಂತರ ಸೃಷ್ಟಿಯಾಗಿತ್ತು. ಅಲ್ಲಿ ಸಂಚರಿಸಲು ಜನರು ಹರಸಾಹಸ ಪಟ್ಟರು. ನಿರ್ಮಾಣ ಹಂತದಲ್ಲಿರುವ ಕೆಳಸೇತುವೆಯಲ್ಲಿಯಲ್ಲಿ ನೀರು ಸಂಗ್ರಹವಾಗಿತ್ತು.