ಬೆಳಗಾವಿ: ‘ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಎಂಎಸ್‌ಆರ್‌ಟಿಸಿ) ಬಸ್‌ಗಳ ನಾಮಫಲಕದಲ್ಲಿ ಕನ್ನಡ ಬಳಸುವ ಸಂಬಂಧ ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕು’ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯುಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
‘ಹೊರ ರಾಜ್ಯಗಳಿಗೆ ತೆರಳುವ (ಕೆಎಸ್‌ಆರ್‌ಟಿಸಿ) ಬಸ್‌ಗಳ ನಾಮಫಲಕದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೂ ಬಳಸಲಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಬರುವ ಎಂಎಸ್‌ಆರ್‌ಟಿಸಿ ಬಸ್‌ಗಳ ನಾಮಫಲಕದಲ್ಲಿ ಕನ್ನಡ ಬಳಸದ್ದರಿಂದ ಗಡಿ ಭಾಗದ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಮಾತನಾಡಿ ಕನ್ನಡ ಬಳಸುವಂತೆ ತಿಳಿಸಬೇಕು’ ಎಂದಿದ್ದಾರೆ.