ಕಾರವಾರ: ಇದು ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕರ ಕಥೆ. ಪಾಠದ ಜೊತೆಗೆ ಬೆಳಗ್ಗೆ ಹಸಿವಿನಿಂದ ಶಾಲೆಗೆ ಬರುವ ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿಯೇ ಬೆಳಗಿನ ಉಪಹಾರದ ವ್ಯವಸ್ಥೆಯನ್ನ ಮಾಡಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ್ ಬಡ ಮಕ್ಕಳಿಗಾಗಿ ಉಪಹಾರ ಆರಂಭಿಸಿದ್ದಾರೆ. ಈ ಶಾಲೆಗೆ ಬರುವ ಮಕ್ಕಳು ಬಡ ಕುಟುಂಬದವರು. ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಬರುತ್ತಿರೋದು ರಾಮಚಂದ್ರ ಅವರ ಗಮನಕ್ಕೆ ಬಂದಿದೆ. ಪೊಷಕರನ್ನು ಕರೆದು ತಿಳಿ ಹೇಳಿದರೂ ಹಲವು ಮಕ್ಕಳು ಹಸಿವಿನಿಂದಲೇ ಶಾಲೆಗೆ ಬರುತ್ತಿದ್ದರು. ಇದನ್ನು ಅರಿತ ರಾಮಚಂದ್ರ ನಾಯ್ಕ್, ಸರ್ಕಾರ ಮಧ್ಯಾಹ್ನ ನೀಡುವ ಬಿಸಿಯೂಟದ ಜೊತೆಗೆ ತಮ್ಮ ಹಣದ ಮೂಲಕ ಬೆಳಗಿನ ಉಪಹಾರ ಸಹ ಪ್ರಾರಂಭಿಸಿದರು.
ರಾಮಚಂದ್ರ ಗುರುಗಳ ಕಾರ್ಯ ನೋಡಿ ಒಂದಿಷ್ಟು ದಾನಿಗಳು ಸಹ ಸಹಾಯ ಹಸ್ತ ನೀಡಿದ್ದಾರೆ. ಶಾಲೆಗೆ ಬರುವ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಗಮನಿಸಿದ ಅವರು, ಪ್ರತಿ ದಿನ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ಖರೀದಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಕೊರೊನಾ ಬಂದಿದ್ದರಿಂದ ಶಾಲೆಗೆ ರಜೆ ನೀಡಿದ್ರೂ ಪ್ರತಿ ದಿನ ತಮ್ಮ ಬೈಕ್ ನಲ್ಲಿ ಮಕ್ಕಳ ಮನೆ ಮನೆಗೆ ತೆರಳಿ ಬಾಳೆಹಣ್ಣು ನೀಡುತ್ತಾ ಬಂದಿದ್ದಾರೆ. ವಿದ್ಯಾಗಮ ಆರಂಭಕ್ಕೂ ತಿಂಗಳ ಮುಂಚೆಯೇ ಕೋವಿಡ್ ಸುರಕ್ಷಾ ಕ್ರಮದೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಮಕ್ಕಳಿಗೆ ಮನೆ ಮನೆಗೆ ತೆರಳಿ ಪಾಠ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.

Laxmi News 24×7