ಹೋಳಿ ಹಬ್ಬದ ದಿನ ಅಶ್ಲೀಲವಾಗಿ ನಿಂದಿಸಿದ ಅಂತ ಬಾಲಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಗುಪ್ತಾಂಗಕ್ಕೆ ಬಣ್ಣ ಹಾಕಿ ಊರ ಮುಖಂಡ ವಿಕೃತಿ ಮೆರೆದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಡಿಯಲ್ಲಿ ನಡೆದಿದೆ.
ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಹಣಮಂತರಾಯ ಎಂಬಾತ ವಿಕೃತಿ ಮೆರೆದಿದ್ದೂ ಅಲ್ಲದೇ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದಾನೆ.
ಹೋಳಿ ಹಬ್ಬದ ಮರುದಿನ ಅಂದರೆ ಮಾರ್ಚ್ 18ರಂದು ಹೋಳಿಹಬ್ಬದ ದಿನ ಈ ಘಟನೆ ನಡೆದಿದೆ.
ಅಪ್ರಾಪ್ತ ಬಾಲಕ ಬಣ್ಣ ಆಡುವ ವೇಳೆ ಗೌಡ ಹಣಮಂತರಾಯ ಮಡಿಕೇಶ್ವರನಿಗೆ ಅಶ್ಲೀಲವಾಗಿ ಬೈದು ಮನೆಗೆ ಓಡಿ ಹೋಗಿದ್ದನಂತೆ. ಬಳಿಕ ಬಾಲಕನ ಮನೆಗೆ ತೆರಳಿದ ಹಣಮಂತರಾಯ ಗೌಡ ಅವರ ತಾಯಿ ಮಲಕಮ್ಮ ಹಿರೇಕುರುಬರಳಿಗೆ ನಿನ್ನ ಮಗನನ್ನು ಕಳುಹಿಸಿ ಕೊಡು ಬುದ್ದಿ ಹೇಳಿ ಕಳುಹಿಸುತ್ತೇನೆ ಎಂದು ಹೇಳಿ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾನೆ.
ಮಗ ತಪ್ಪು ಮಾಡಿದರೆ ನಾನು ಹೊಡೆದು ಬುದ್ದಿ ಹೇಳ್ತೀನಿ ಎಂದು ಮಲಕಮ್ಮ ಬಾಲಕನಿಗೆ ಗೌಡ ಎದುರೇ ಎರೆಡೇಟು ಹೊಡೆದು ಬುದ್ಧಿ ಹೇಳಿದ್ದಾಳೆ. ಆದರೆ ಇದು ಹಣಮಂತರಾಯನಿಗೆ ಸಮಾಧಾನ ತಂದಿಲ್ಲ. ಬಳಿಕ ಬಾಲಕನನ್ನ ಒತ್ತಾಯಪೂರ್ವಕವಾಗಿ ತನ್ನ ವಶಕ್ಕೆ ಪಡೆದ ಹಣಮಂತರಾಯ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅದೂ ಸಾಲದು ಎಂಬಂತೆ ಬೆತ್ತಲು ಮಾಡಿ ಅಲ್ಲೆ ಇದ್ದ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಬಣ್ಣ ಎರಚಿದ್ದಾನೆ.
ಬೆತ್ತಲಾಗಿ ನಿಂತ ಬಾಲಕನ ಗುಪ್ತಾಂಗಕ್ಕೆ ಕಪ್ಪು ಆಯಿಲ್, ಬಣ್ಣವನ್ನ ಎರಚಿ ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಇದನ್ನ ಮೊಬೈಲ್ ಒಂದರಲ್ಲಿ ವಿಡಿಯೋ ಮಾಡಿಸಿದ್ದಾನೆ ಎನ್ನಲಾಗಿದೆ.
ಮಾರ್ಚ್ 18ರಂದು ನಡೆದ ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಬೆಳಕಿಗೆ ಬಂದಿದೆ. ಇನ್ನು ಬಾಲಕನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದರಿಂದ ಬಾಲಕ ಅಸ್ವಸ್ಥಗೊಂಡಿದ್ದ. ಹೀಗಾಗಿ ಆತನನ್ನ ಮೊದಲಿಗೆ ಬಸವನಬಾಗೇವಾಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆನ್ನು, ತಲೆ, ಕೈ-ಕಾಲಿಗೆ ಹಲ್ಲೆ ನಡೆದಿದ್ದರಿಂದ 21 ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.