ಅಬುಧಾಬಿ: ಐಪಿಎಲ್ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬದಲು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ವಾಡಿಕೆಯಂತೆ ಕಳೆದ ಐಪಿಎಲ್‍ನ ಫೈನಲ್‍ನಲ್ಲಿ ಮುಖಾಮುಖಿಯಾಗಿದ್ದ ಸಿಎಸ್‍ಕೆ ಮತ್ತು ಮುಂಬೈ ತಂಡದ ಈ ಟೂರ್ನಿಯ ಮೊದಲ ಪಂದ್ಯವನ್ನು ಆಡಬೇಕಿತ್ತು. ಆದರೆ ಸಿಎಸ್‍ಕೆ ತಂಡದ ಕೆಲ ಸಹಾಯಕ ಸಿಬ್ಬಂದಿ ಮತ್ತು ಇಬ್ಬರು ಆಟಗಾರರಿಗೆ ಕೊರೊನಾ ಬಂದ ಕಾರಣ ಚೆನ್ನೈ ತಂಡ ಮೊದಲ ಪಂದ್ಯವನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಐಪಿಎಲ್‍ನ ಆರಂಭಿಕ ಪಂದ್ಯದಲ್ಲಿ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ತಂಡ ಮತ್ತು ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ತಂಡವನ್ನು ಆಡಿಸಲು ಬಿಸಿಸಿಐ ತೀರ್ಮಾನ ಮಾಡಿತ್ತು. ಆದರೆ ಈ ನಡುವೆ ಈ ಪಂದ್ಯಕ್ಕೆ ಕೊರೊನಾ ಅಡ್ಡಗಾಲು ಹಾಕಿದ್ದು, ಸೆಪ್ಟೆಂಬರ್ 19ರೊಳಗೆ ಸಿಎಸ್‍ಕೆ ತಂಡದ ಆಟಗಾರರು ಸೋಂಕಿನಿಂದ ಹೊರಬರುವುದು ಡೌಟು ಎನ್ನಲಾಗಿದೆ. ಈ ಕಾರಣಕ್ಕೆ ಐಪಿಎಲ್‍ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡ ಆರಂಭಿಕ ಪಂದ್ಯವನ್ನು ಆಡಲಿದೆ ಎನ್ನಲಾಗಿದೆ.
ಈ ವಿಚಾರವಾಗಿ ಬಿಸಿಸಿಐ ಉನ್ನತ ಮೂಲಗಳಿಂದ ಮಾಹಿತಿ ಹೊರಬಿದ್ದಿದ್ದು, ಈ ಬಾರಿ ಐಪಿಎಲ್ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಮೊದಲ ಪಂದ್ಯದಲ್ಲಿ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದರೆ, ಆಟದ ಕ್ರೇಜ್ ಜಾಸ್ತಿಯಾಗುತ್ತದೆ. ಒಂದು ಕಡೆ ರೋಹಿತ್ ಸಿದ್ಧವಾಗಿದ್ದಾರೆ. ಆದರೆ ಧೋನಿಯವರ ತಂಡ ಆಡುವುದು ಅನುಮಾನವಾಗಿದೆ. ಹೀಗಾಗಿ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವನ್ನು ಆಡಿಸಲು ತಯಾರಿ ನಡೆದಿದೆ ಎಂದು ತಿಳಿದು ಬಂದಿದೆ.
Laxmi News 24×7