ಚಿಕ್ಕೋಡಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಮನೆ, ಮನೆಗೆ ಪಡಿತರ ತಲುಪಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ಕೈ ಬಿಟ್ಟಿದೆ ಎಂದು ಆಹಾರ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸಿಎಂ ಜೊತೆಗೆ ಚರ್ಚಿಸಿ ರಾಜ್ಯದಲ್ಲಿ ಈ ಯೋಜನೆಯನ್ನು ಕೈ ಬಿಡಲಾಗಿದೆ. ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್ ವಿತರಣೆ ಮಾಡಲಾಗುವುದು ಎಂದರು.
ಸಿಎಂ ಬಸವರಾಜ ಬೊಮ್ಮಾಯಿಯ ಚೊಚ್ಚಲ ಬಜೆಟ್ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಉಮೇಶ ಕತ್ತಿ, ಬಜೆಟ್‍ನಲ್ಲಿ ಕೃಷಿಗೆ 8 ಸಾವಿರ ಕೋಟಿ ರೂ. ನೀಡಿ ರೈತ ಪರ ಬಜೆಟ್ ಮಂಡಿಸಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಬೋಗಸ್ ಬಜೆಟ್ ಎಂದಿದ್ದಾರೆ. ರಾಜ್ಯದಲ್ಲಿ ಜನ ಪರ ಬಜೆಟ್ ಹಾಗೂ ರಾಜ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಬಜೆಟ್‍ನ್ನು ಸಿಎಂ ಮಂಡಿಸಿದ್ದಾರೆ. ನೀರಾವರಿ ಯೋಜನೆಗೆ 25 ಸಾವಿರ ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.