ಅಂಬೇಡ್ಕರ್ ನಗರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮನಮೋಹನ್ ಸಿಂಗ್, ಮುಲಾಯಂ ಸಿಂಗ್ ಹಾಗೂ ಮತ್ತಿತರರು ಬಿಜೆಪಿಯನ್ನು ಬೆಂಬಲಿಸಿ ಸುದ್ದಿಯಾಗಿದ್ದಾರೆ.
ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಮತ್ತು ವಿದೇಶಾಂಗ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದರು.
ಇದೀಗ ಬಿಜೆಪಿಯನ್ನು ಬೆಂಬಲಿಸಿದ್ದಾರೆಯೇ? ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದು, ಮುಖ್ಯಮಂತ್ರಿ ಗಾದಿಗೇರುವ ಹುಮ್ಮಸ್ಸಿನಲ್ಲಿರುವ ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆಯೇ? ಎಂಬ ಅಚ್ಚರಿ ಕಾಡದೆ ಇರದು.
ಅಸಲಿಗೆ ಇವರಾರೂ ರಾಜಕಾರಣಿಗಳಲ್ಲ. ಅಂಬೇಡ್ಕರ್ ನಗರದ ಜಲಾಲ್‌ಪುರ್ ವಿಧಾನಸಭಾ ಕ್ಷೇತ್ರದ ಮತದಾರರು ಹಾಗೂ ಸಹೋದರರು. ಹೈದರಾಬಾದ್ ಎಂಬ ಹಳ್ಳಿಯ ರೈತ ಮಿಠಾಯಿ ಲಾಲ್ ಮತ್ತು ಚಂದ್ರಸೇನಾ ದಂಪತಿಯ ಮಕ್ಕಳು.
57 ವರ್ಷದ ಮಿಠಾಯಿ ಲಾಲ್ ಅವರಿಗೆ 7 ಮಂದಿ ಮಕ್ಕಳು. ಇಬ್ಬರಿಗೆ ಮನಮೋಹನ್ ಸಿಂಗ್, ಮುಲಾಯಂ ಸಿಂಗ್ ಯಾದವ್ ಎಂಬ ಹೆಸರಿದ್ದರೆ, ಉಳಿದ ಐವರಿಗೆ ಬಾಳ್ ಠಾಕ್ರೆ, ಜೈಲ್ ಸಿಂಗ್, ಕಲ್ಯಾಣ್ ಸಿಂಗ್ , ರಾಜನಾಥ್ ಸಿಂಗ್ ಮತ್ತು ಜಯಲಲಿತಾ ಎಂಬ ಹೆಸರುಗಳಿವೆ.