ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಗಜಾನನ ಬಾಳಾರಾಮ್ ನಾಯ್ಕ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗುಂದಿ ಗ್ರಾಮದ ವಿದ್ಯಾ ಪಾಟೀಲ್, ಆಕೆಯ ಮಗ ರಿತಿಕ್ ಪಾಟೀಲ್ ಹಾಗೂ ಆತನ ಸ್ನೇಹಿತ ಪರುಶರಾಮ್ ಗೋಂಧಳಿ ಬಂಧಿತ ಆರೋಪಿಗಳು. ಕೊಲೆಯಾದ ಗಜಾನನ ನಾಯ್ಕ ಆರೋಪಿ ವಿದ್ಯಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ, ಆಕೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ಮೂವರು ಆರೋಪಿಗಳು ಕೂಡಿಕೊಂಡು ಗಜಾನನ ಮನೆಯಲ್ಲಿಯೇ ಆತನನ್ನು ಕೊಲೆ ಮಾಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ಸುನೀಲಕುಮಾರ್ ನಂದೇಶ್ವರ ನೇತೃತ್ವದ ತಂಡವು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದೆ.