ಲಖನೌ: ಉತ್ತರ ಪ್ರದೇಶದಲ್ಲಿ ನಿನ್ನೆಯಷ್ಟೇ 6ನೇ ಹಂತದ ಮತದಾನ ಮುಗಿದಿದ್ದು, ಮಾರ್ಚ್ 7ಕ್ಕೆ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಇದೇ 10 ರಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮಂಡಿಯ ಸ್ಟ್ರಾಂಗ್ ರೂಂ ಪಕ್ಕದಲ್ಲಿ ವಿವಿಪ್ಯಾಟ್‌ನ ಸ್ಲಿಪ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದು ಚುನಾವಣಾ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದು, ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಯುಪಿ ಚುನಾವಣೆಯ 6ನೇ ಹಂತದ ಮತದಾನ ಪೂರ್ಣಗೊಂಡ ನಂತರ, ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಮಂಡಿ ಸಮಿತಿಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿತ್ತು.
ಸ್ಟ್ರಾಂಗ್ ರೂಂ ಪಕ್ಕದಲ್ಲಿ ವಿವಿಪ್ಯಾಟ್ ಚೀಟಿಗಳು ಪತ್ತೆಯಾಗುತ್ತಿದ್ದಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಾಯಕರು ಮಂಡಿ ಸಮಿತಿ ಬಳಿ ಪ್ರತಿಭಟನೆ ನಡೆಸಿದ್ದಾರೆ.