ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ನಿರ್ವಹಣೆ ಹೆಸರಲ್ಲಿ ಅಂಗನವಾಡಿ ಕೇಂದ್ರಗಳನ್ನು ಪರೋಕ್ಷವಾಗಿ ಗ್ರಾಮ ಪಂಚಾಯತ್‌ಗಳ “ಹತೋಟಿ’ಗೆ ನೀಡುವ ಸರಕಾರದ ನಿರ್ಧಾರವು ಅಂಗನವಾಡಿ ನೌಕರರು ಮತ್ತು ಪಂಚಾಯತ್ ಸದಸ್ಯರ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.
ಅಂಗನವಾಡಿ ಕೇಂದ್ರಗಳನ್ನು ಯಾವುದೇ ರೂಪದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ನೀಡುವುದನ್ನು ಒಪ್ಪುವುದಿಲ್ಲ ಎಂದು ಅಂಗನವಾಡಿ ನೌಕರರು ಹೇಳುತ್ತಿದ್ದರೆ, ಇದರಿಂದ ಯಾವುದೇ ಸಮಸ್ಯೆ ಇಲ್ಲ ಅಂಗನವಾಡಿಗಳ ನಿರ್ವಹಣೆಯನ್ನು ಗ್ರಾ.ಪಂ.ಗಳಿಗೆ ಕೊಟ್ಟರೆ ಅವುಗಳಿಗೆ ಇನ್ನಷ್ಟು ಶಕ್ತಿ – ಸಾಮರ್ಥ್ಯ ಸಿಗಲಿದೆ ಎಂದು ಗಾ.ಪಂ.ಸದಸ್ಯರು ವಾದಿಸುತ್ತಿದ್ದಾರೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಯೋಜನೆಯ ಅನುಷ್ಠಾನ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿ ಗ್ರಾಮ ಪಂಚಾಯತ್‌ಗಳ ಪಾತ್ರದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಜಂಟಿ ಸುತ್ತೋಲೆ ಅಂಗನವಾಡಿ ನೌಕರರು ಮತ್ತು ಪಂಚಾಯತ್ ಸದಸ್ಯರ ನಡುವೆ ಪರ-ವಿರೋಧಕ್ಕೆ ಎಡೆ ಮಾಡಿಕೊಟ್ಟಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಯೋಜನೆಯು ಆರು ವರ್ಷದೊಳಗಿನ ಮಕ್ಕಳ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿದೆ. ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆ ಒದಗಿಸಲಾಗುತ್ತಿದ್ದು, ಇದನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಅಂಗನವಾಡಿ ನೌಕರರು ವಿರೋಧಿಸುತ್ತಿದ್ದು, ಪಂಚಾಯತ್ ನೌಕರರು ಸಮರ್ಥಿಸುತ್ತಿದ್ದಾರೆ.
ಐಸಿಡಿಎಸ್ ಯೋಜನೆಯ ಪರಿಣಾಮಕಾರಿ ನಿರ್ವಹಣೆ ಹೆಸರಲ್ಲಿ ಅಂಗನವಾಡಿ ಕೇಂದ್ರಗಳನ್ನು ಪಂಚಾಯತ್‌ಗಳಿಗೆ ಒಪ್ಪಿಸಲಾಗುತ್ತಿದೆ. ಇದರಿಂದ ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಹೆಚ್ಚಾಗುತ್ತದೆ. ಹೀಗಾದರೆ, ಐಸಿಡಿಎಸ್ ಯೋಜನೆ ಕುಂಠಿತಗೊಳ್ಳಲು ಸರಕಾರವೇ ಕಾರಣವಾಗುತ್ತದೆ. ಆದ್ದರಿಂದ ಐಸಿಡಿಎಸ್ ಯೋಜನೆ ನಿರ್ವಹಣೆಯಲ್ಲಿ ಪಂಚಾಯತ್‌ಗಳ ಪಾತ್ರಕ್ಕೆ ಸಂಬಂಧಿಸಿ 2021ರ ಅ.28ರಂದು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದುಕೊಳ್ಳಬೇಕು ಎಂಬುದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಗ್ರಹವಾಗಿದೆ.