ಕೊಪ್ಪಳ: ಜಿಲ್ಲೆಯ 5 ನಗರ, ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಎರಡರಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬಂದರೆ, ಉಳಿದ ಮೂರರಲ್ಲಿ ಜೆಡಿಎಸ್ ಹಾಗೂ ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.ಕಾರಟಗಿ ಪುರಸಭೆಯ 23 ಸ್ಥಾನಗಳಲ್ಲಿ ಬಿಜೆಪಿ -11, ಕಾಂಗ್ರೆಸ್-11, ಜೆಡಿಎಸ್-1 ಸ್ಥಾನ ಪಡೆದಿದೆ.
ಕೈ-ಕಮಲ ಸಮಬಲ ಸಾಧಿಸಿದ್ದು,
ಜೆಡಿಎಸ್ ನಿರ್ಣಾಯಕ ಪಾತ್ರವಹಿಸಲಿದೆ. ಭಾಗ್ಯನಗರ ಪಟ್ಟಣದ 19 ಸ್ಥಾನಗಳಲ್ಲಿ ಕಾಂಗ್ರೆಸ್-8, ಬಿಜೆಪಿ-9, ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. ಬಿಜೆಪಿ ಹೆಚ್ಚು ಸ್ಥಾನ ಬಪಡೆದರೂ ಬಹುಮತಕ್ಕೆ ಒಂದು ಸ್ಥಾನ ಕೊರತೆಯಿದ್ದು, ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.
ಕನಕಗಿರಿ ಪಪಂನ 17 ಸ್ಥಾನಗಳಲ್ಲಿ ಕಾಂಗ್ರೆಸ್- 12, ಬಿಜೆಪಿ-5 ಸ್ಥಾನ ಪಡೆದಿದ್ದು, ಕಾಂಗ್ರೆಸ್ಗೆ ಸರಳ ಬಹುಮತ ದೊರೆತಿದೆ. ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸ್ವಕ್ಷೇತ್ರ ಕುಕನೂರು ಪಪಂನ 19 ಸ್ಥಾನಗಳಲ್ಲಿ ಕಾಂಗ್ರೆಸ್- 10 ಸ್ಥಾನ ಪಡೆದರೆ, ಬಿಜೆಪಿ- 9 ಸ್ಥಾನ ಪಡೆದಿದ್ದು, ಸಚಿವರಿಗೆ ಮುಖಭಂಗವಾಗಿದೆ. ಕಾಂಗ್ರೆಸ್ಗೆ ಸರಳ ಬಹುಮತ ಒಲಿದಿದೆ. ತಾವರಗೇರಾ ಪಪಂನಲ್ಲಿ ಕಾಂಗ್ರೆಸ್-8, ಬಿಜೆಪಿ- 7, ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಇಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.
ಒಟ್ಟಾರೆ 96 ಸ್ಥಾನಗಳಲ್ಲಿ 49 ಸ್ಥಾನ ಪಡೆವ ಮೂಲಕ ಕಾಂಗ್ರೆಸ್ಗೆ ಮುನ್ನಡೆಯಾಗಿದೆ. ಬಿಜೆಪಿ 41 ಸ್ಥಾನ ಪಡೆದು ಎರಡನೇ ಸ್ಥಾನಕ್ಕಿಳಿದರೆ, ಜೆಡಿಎಸ್ ಒಂದು ಹಾಗೂ ಪಕ್ಷೇತರರು ಐದು ಸ್ಥಾನ ಪಡೆದಿರುವುದು ವಿಶೇಷ.