ಕರ್ನಾಟಕ ರಾಜ್ಯ ಬಂದ್‍ಗೆ ನಮ್ಮ ನೈತಿಕ ಬೆಂಬಲ ಇದೆ. ಕರ್ನಾಟಕದ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟಿದ್ದಾರೆ. ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಕೃತ್ಯ ಮತ್ತು ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ಖಂಡಿಸಿ ಡಿ.31ರಂದು ಕರ್ನಾಟಕ ಬಂದ್‍ಗೆ ಕೆಲ ಕನ್ನಡ ಸಂಘಟನೆಗಳು ಕರೆ ಕೊಟ್ಟಿವೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಬಂದ್‍ಗೆ ನಾವು ನೈತಿಕ ಬೆಂಬಲ ಕೊಡುತ್ತೇವೆ ಎಂದರು. ಇನ್ನು ಕರ್ನಾಟಕದ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಸದನದಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. ನಿರ್ಣಯ ಅಂಗೀಕರಿಸಿ ಸರ್ಕಾರ ಕೈಕಟ್ಟಿ ಕೂರುವುದಲ್ಲ. ನಿರ್ಣಯ ಮಹಾರಾಷ್ಟ್ರಕ್ಕೆ ಕಳಿಸಿ ಕ್ರಮಕ್ಕೆ ಒತ್ತಾಯಿಸಬೇಕು ಎಂದರು.