ಧಾರವಾಡ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ಉತ್ತರ ಕರ್ನಾಟಕಕ್ಕೆ ಮಳೆ ಆತಂಕ ಇಲ್ಲ ಎಂದು ಹವಾಮಾನ ತಜ್ಞ ಡಾ.ಆರ್.ಹೆಚ್. ಪಾಟೀಲ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿತ್ತು. ಅದರ ಮಾರುತಗಳು ಉತ್ತರಮುಖ ಚಲನೆ ಹೊಂದಿದ್ದವು. ಅದರಿಂದ ರಾತ್ರಿ ಮತ್ತು ಬೆಳಗ್ಗೆ ಮಳೆಯಾಗಿತ್ತು. ಆದರೆ ನಾಳೆ (ಶುಕ್ರವಾರ) ಯಾವುದೇ ಮಳೆ ಲಕ್ಷಣ ಇಲ್ಲ. ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ ಇರಲಿದೆ. ಸದ್ಯ ಮಳೆ ಮಾರುತಗಳು ಮಹಾರಾಷ್ಟ್ರದತ್ತ ಚಲನೆ ಮಾಡಿವೆ. ಹೀಗಾಗಿ ನಮ್ಮ ಭಾಗದಲ್ಲಿ ಸದ್ಯಕ್ಕೆ ಮಳೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಡಿ. 3ರಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಲಿದ್ದು, ಚಂಡಮಾರುತ ಆಗುವ ಲಕ್ಷಣ ಇದೆ. ಅದು ಪಶ್ಚಿಮೋತ್ತರವಾಗಿ ಚಲಿಸಲಿದೆ. ಹೀಗಾಗಿ ಅದರ ಬಾಧೆ ಕರ್ನಾಟಕಕ್ಕೆ ಇಲ್ಲ ಎಂದು ಹೇಳಿದ್ದಾರೆ.