ಬೆಂಗಳೂರು: ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿ ತಿಂತಾರಾ? ಕುರಿ ರಕ್ತ ಹುರಿದು ಕೊಟ್ಟರೆ ತಿಂತಾರಾ? ಎಂದು ಪ್ರಶ್ನಿಸಿದ್ದ ಹಂಸಲೇಖಾ ಇಂದು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದ್ರ ಬೆನ್ನಲ್ಲೇ ಬೆಂಬಲಿಗರೊಂದಿಗೆ ಠಾಣೆಗೆ ಆಗಮಿಸಿದ ಚೇತನ್ ಅವರನ್ನು ಇತರ ಪ್ರತಿಭಟನಾಕಾರರ ರೀತಿಯಲ್ಲೇ ತಡೆದಿದ್ದಾರೆ. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಚೇತನ್ ತಮ್ಮ ಬೆಂಬಲಿಗರೊಂದಿಗೆ ಧರಣಿಗೆ ಕುಳಿತಿದ್ದಾರೆ.
ಈಗಾಗಲೇ ಎರಡು ಬಾರಿ ವಿಚಾರಣೆ ತಪ್ಪಿಸಿಕೊಂಡಿದ್ದ ಹಂಸಲೇಖ, ಇಂದು ನಗರದ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಇನ್ನು ಹಂಸಲೇಖ ಪರ ಹಾಗೂ ವಿರೋಧ ಪ್ರತಿಭಟನೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.