ನವದೆಹಲಿ: ದೇವಸ್ಥಾನದಲ್ಲಿನ ಪೂಜಾ ವಿಧಿ ವಿಧಾನ ಹೇಗಿರಬೇಕು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಲಾಗದು ಎಂದಿರುವ ಸುಪ್ರೀಂ ಕೋರ್ಟ್, ಈ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಯೊಂದರ ಸಂಬಂಧ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದೆ.
ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪೂಜಾ ವಿಧಿವಿಧಾನಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ‘ದೇವಾಲಯದಲ್ಲಿ ಯಾವ ರೀತಿ ಪೂಜೆ ಮಾಡಬೇಕು?
ತೆಂಗಿನಕಾಯಿಯನ್ನು ಹೇಗೆ ಒಡೆಯಬೇಕು? ದೇವರ ಮೂರ್ತಿಗೆ ಹೇಗೆ ಹೂಮಾಲೆ ಹಾಕಬೇಕು ಎಂದೆಲ್ಲ ನ್ಯಾಯಾಲಯ ಹೇಳಲಾಗದು’ ಎಂದು ಮಂಗಳವಾರ ತಿಳಿಸಿದೆ.
‘ದೇವಸ್ಥಾನದ ನಿತ್ಯದ ಕಾರ್ಯಭಾರದಲ್ಲಿ ಸಂವಿಧಾನಬದ್ಧ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ
ಸ್ಪಷ್ಟಪಡಿಸಿತು.
ತಿರುಪತಿ ಬಾಲಾಜಿ ದೇವಸ್ಥಾನವು ಸಾರ್ವಜನಿಕ ದೇವಾಲಯವಾಗಿದ್ದು, ಅಲ್ಲಿ ನಡೆಯಬೇಕಾದ ಸೇವೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಶ್ರೀವಾರಿ ದಾದಾ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಧಾರ್ಮಿಕ ವಿಧಿ ವಿಧಾನಗಳ ಪಾಲನೆ ವಿಚಾರದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಹೇಗೆ ಮಧ್ಯ ಪ್ರವೇಶಿಸಲಾದೀತು ಎಂದು ಪ್ರಶ್ನಿಸಿತು. ಸಂಪ್ರದಾಯ ಉಲ್ಲಂಘನೆಯಾಗುತ್ತಿದೆ ಎನ್ನುವುದಾದರೆ, ಸಾಕ್ಷ್ಯಾಧಾರಗಳೊಂದಿಗೆ ವಿಚಾರಣಾ ನ್ಯಾಯಾಲಯ ಇದನ್ನು ಪರಿಶೀಲಿಸಬಹುದು ಎಂದು ಹೇಳಿದೆ.
ಅರ್ಜಿದಾರರ ದೂರಿನ ಬಗ್ಗೆ ಪರಿಶೀಲಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೂ ತಿಳಿಸಿದ ಸುಪ್ರೀಂ ಕೋರ್ಟ್, ಅದಾದ ಮೇಲೂ ಅರ್ಜಿದಾರರಿಗೆ ಸಮಾಧಾನವಾಗದಿದ್ದರೆ, ಸೂಕ್ತ ವೇದಿಕೆಯ ಮೊರೆ ಹೋಗುವಂತೆ ಸೂಚಿಸಿತು.
ಈ ವಿಷಯವಾಗಿ ದಾದಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಆಂಧ್ರ ಪ್ರದೇಶ ಹೈಕೋರ್ಟ್ ವಜಾ ಮಾಡಿತ್ತು.