ಮಂಡ್ಯ: ನಾವು ಜನರಿಗೆ ಒಳ್ಳೆಯದು ಹೇಳಿದರೂ ಅವರು ಕೇಳುವುದಕ್ಕೆ ಸಿದ್ಧರಿಲ್ಲ. ಹೀಗಾಗಿ ನಮಗೆ ರಕ್ಷಣೆ ಕೊಡಿ. ನಿಮಗೆ ರಕ್ಷಣೆ ಕೊಡಲು ಆಗಲ್ಲ ಅಂದರೆ ನಮ್ಮನ್ನ ಕೋವಿಡ್ ಕೆಲಸದಲ್ಲಿ ಬಳಸಿಕೊಳ್ಳಬೇಡಿ ಎಂದು ಆಶಾ ಕಾರ್ಯಕರ್ತೆಯರು ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಗ್ರಹಿಸಿದ್ದಾರೆ.
ಆಶಾ ಕಾರ್ಯಕರ್ತೆಯ ಮೇಲೆ ಮತ್ತೊಂದು ಹಲ್ಲೆ ಪ್ರಕರಣ ನಡೆದಿದ್ದು, ಅಂತರ ಕಾಪಾಡಿಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಲಾಗಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ಆಶಾ ಕಾರ್ಯಕರ್ತೆಯರ ಮೇಲೆ ಪದೇ ಪದೇ ಹಲ್ಲೆಗಳು ಜರುಗುತ್ತಿವೆ. ನಾವು ಯಾಕೆ ಅವರ ಕೈಯಿಂದ ಹೊಡೆಸಿಕೊಳ್ಳಬೇಕು. ನಮಗೆ ರಕ್ಷಣೆ ಕೊಡಿ, ಇಲ್ಲವಾದರೆ ನಮ್ಮನ್ನ ಬಿಟ್ಟು ಬಿಡಿ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಮೊಸಳೆಕೊಪ್ಪಲು ಗ್ರಾಮದಲ್ಲಿ ಆಶಾ ಕಾರ್ಯಕರ್ತೆ, ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಿದೆ. ಅಲ್ಲಿಂದ ಬಂದವರ ಜೊತೆ ಅಂತರ ಕಾಪಾಡಿಕೊಳ್ಳಿ, ಜಾಗೃತರಾಗಿರಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಬಂದ ಮಂಜೇಗೌಡ, ದರ್ಶನ್, ದೇವರಾಜು, ರಘು, ಪ್ರಸನ್ನ ಹಾಗೂ ಚಂದನ್ ಎಂಬವರು ಆಶಾ ಕಾರ್ಯಕರ್ತೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಆಶಾ ಕಾರ್ಯಕರ್ತೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಕೆ.ಆರ್.ಪೇಟೆಯ ಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಇಲ್ಲ ಎಂದು ನಮ್ಮನ್ನ ನಮ್ಮ ಪಾಡಿಗೆ ಬಿಡಿ ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ.