ಬೆಂಗಳೂರು: ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾಗಿದೆ.
ಹೌದು. ಯೋಗೇಶ್ ಗೌಡ ಹತ್ಯೆ ಕೇಸ್‍ನಲ್ಲಿ ಸಾಕ್ಷಿ ನಾಶ ಪ್ರಕರಣದಲ್ಲಿ ಕುಲಕರ್ಣಿಗೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ವಿರುದ್ಧ ಸಿಬಿಐ ಎರಡು ಕೇಸ್ ದಾಖಲಿಸಿತ್ತು. ಇದೀಗ ಸಾಕ್ಷ್ಯನಾಶ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ವಿನಯ್ ಕುಲಕರ್ಣಿ ಅವರು ಈಗಾಗಲೇ ಯೋಗೇಶ್ ಗೌಡ ಹತ್ಯೆ ಕೇಸ್‍ನಲ್ಲಿ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದಿದ್ದರು. ನ್ಯಾ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ ಸಿಬಿಐ ಆಕ್ಷೇಪಣೆಯ ನಡುವೆಯೂ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಆದೇಶ ಪ್ರಕಟಿಸಿತ್ತು.
ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ. ಸಿಬಿಐ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ವಿನಯ್ ಕುಲಕರ್ಣಿಗೆ ಷರತ್ತು ವಿಧಿಸಿತ್ತು. ವಿನಯ್ ಕುಲಕರ್ಣಿ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ಪರ ವಕೀಲ ಎಎಸ್.ಜಿ. ಎಸ್.ವಿ. ರಾಜು ವಾದ ಮಂಡನೆ ಮಾಡಿದ್ದರು
ಸಿಬಿಐ ಪರ ವಾದ ಏನಿತ್ತು?
ಎ1 ಆರೋಪಿಗಳಿಂದ ಎ15 ರವರೆಗಿನ ಆರೋಪಿಗಳಿಗೆ ಆರು ಲಕ್ಷ ರೂಪಾಯಿ ಹಣ ಪಾವತಿಯಾಗಿದೆ. ಕೇಸ್ ತನಿಖಾಧಿಕಾರಿಗೂ ಎರಡು ಲಕ್ಷ ರೂಪಾಯಿ ಹಣ ಪಾವತಿಯಾಗಿದೆ. ವಿನಯ್ ಕುಲಕರ್ಣಿ ಮನವಿ ಮೇರೆಗೆ ಹಾರ್ನ್ ಬಿಲ್ ರೆಸಾರ್ಟ್ ನಲ್ಲಿ ಸಾಕ್ಷಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಜೊತೆಗೆ ವೈಷಮ್ಯ ಇತ್ತು. ಭೂ ವಿವಾದದಿಂದ ಕೊಲೆಯಾಗಿದೆ ಎಂದು ಬಿಂಬಿಸುವ ಯತ್ನ ಮಾಡಿದ್ದರು. ಸಿಬಿಐ ತನಿಖೆ ನಡೆಸಿದ ಬಳಿಕ ದೊಡ್ಡ ಷಡ್ಯಂತ್ರ ಬೆಳಕಿಗೆ ಬಂದಿದೆ. ವಿನಯ್ ಕುಲಕರ್ಣಿ ಕೊನೆಯಲ್ಲಿ ಪ್ರಮುಖ ಪಾತ್ರವಾಗಿದ್ದು, ಸಾಕ್ಷ್ಯವನ್ನು ತಿರುಚಲಾಗಿದೆ. ಪೊಲೀಸ್ ತನಿಖೆಯಲ್ಲಿ ಕೊಲೆ, ಸಣ್ಣ ಷಡ್ಯಂತ್ರ ಮಾತ್ರ ಪ್ರಸ್ತಾಪವಾಗಿದೆ.
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಅವರನ್ನು ಸಿಬಿಐ 2020ರ ನವೆಂಬರ್ 05 ರಂದು ಬಂಧಿಸಿತ್ತು.