ಯಾದಗಿರಿ: ಜೂನ್ ಹಾಗೂ ಜುಲೈನಲ್ಲಿ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 225 ಶಾಲೆಗಳ ಫಲಿತಾಂಶ ಹೊರ ಬಿದ್ದಿದೆ. ಜಿಲ್ಲೆಯ 33 ಶಾಲೆಗಳು ಎ ಗ್ರೇಡ್, 56 ಶಾಲೆಗಳು ಬಿ ಗ್ರೇಡ್ ಹಾಗೂ 136 ಶಾಲೆಗಳು ಸಿ ಗ್ರೇಡ್ ಫಲಿತಾಂಶ ಪಡೆದಿವೆ. ಅವುಗಳಲ್ಲಿ ಸರ್ಕಾರಿ ಶಾಲೆಗಳು 122, ಅನುದಾನಿತ 17, ಅನುದಾನ ರಹಿತ 86 ಶಾಲೆಗಳು ಸೇರಿವೆ.
ಈ ಬಾರಿಯ ಎಸ್ಎಸ್‍ಎಲ್‍ಸಿ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಲ್ಕು ವಿದ್ಯಾರ್ಥಿಗಳ ವಿವರ ಇಂತಿದ್ದು, ಶಹಾಪುರದ ಆದರ್ಶ ವಿದ್ಯಾಲಯದ ರಮ್ಯಾ 620 ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 14 ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.ಅದೇ ಶಾಲೆಯ ಸಪ್ನಾ ಎಲವಾರ 619 ಅಂಕಗಳಿಸುವ ಮೂಲಕ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನದಲ್ಲಿ ಯಾದಗಿರಿಯ ಮಹಾತ್ಮಾ ಗಾಂಧಿ ಇಂಗ್ಲಿಷ್ ಮಿಡಿಯಂ ಶಾಲೆಯ ಸುಷ್ಮಾ 617 ಅಂಕಗಳು ಮತ್ತು ರಾಚೂಟಿ ವೀರಣ್ಣ ಪ್ರೌಢಶಾಲೆಯ ಪ್ರಿಯದರ್ಶಿನಿ ಡಿ.ಜಿ 617 ಅಂಕಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನಗಳನ್ನು ಪಡೆದಿದ್ದಾರೆ.