ಬೆಂಗಳೂರು: ಆಗಸ್ಟ್ ಆರಂಭದಲ್ಲೇ ನಿರೀಕ್ಷೆಯಂತೆ ರಾಜ್ಯದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಆರ್ಭಟದಿಂದ ಸಾವಿರಾರು ಕೋಟಿ ಹಾನಿ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ರಾಜ್ಯ ಸರ್ಕಾರ ತಡವಾಗಿ ಎಚ್ಚೆತ್ತು ಪ್ರವಾಹ ನಿರ್ವಹಣೆಯಲ್ಲಿ ತೊಡಗಿದೆ. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ನಿರ್ವಹಣೆ ಆಗ್ತಿಲ್ಲ. ಕಾರಣ ಸರ್ಕಾರದ ಬೊಕ್ಕಸ ಖಾಲಿ ಆಗಿರೋದು. ಇಂತಹ ಸಂಕಷ್ಟದ ವೇಳೆಯಲ್ಲೂ ರಾಜ್ಯ ಸರ್ಕಾರ ಮತ್ತೆ ಹಳೆಯ ತಪ್ಪನ್ನೇ ಮಾಡಿದೆ.
ಇವತ್ತು ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ್, ‘ಅಡ್ವಾನ್ಸ್’ ಪರಿಹಾರ ಕೇಳಿದ್ದಾರೆ. ಕಳೆದ ವರ್ಷದ ನೆರೆಯಿಂದ ಸರ್ಕಾರವೇ ಹೇಳುವಂತೆ 35,000 ಕೋಟಿ ರೂ. ನಷ್ಟವಾಗಿದೆ. ಆದ್ರೆ, ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ 1860 ಕೋಟಿ ರೂ. ಕಳೆದ ವರ್ಷದ ಬಾಕಿ ಹಣದ ಬಗ್ಗೆ ಮೋದಿ ಮುಂದೆ ಸಚಿವರ್ಯಾರು ತುಟಿಯೇ ಬಿಚ್ಚಿಲ್ಲ. ಆದ್ರೆ, ಈ ಬಾರಿ 4,000 ಕೋಟಿ ರೂ. ಅಂದಾಜು ನಷ್ಟವಾಗಿದ್ದು, ‘ಅಡ್ವಾನ್ಸ್’ ರೂಪದಲ್ಲಿ 395 ಕೋಟಿ ರೂ. ಕೊಡಿ ಅಂತಷ್ಟೇ ಸಚಿವರು ಮೋದಿಗೆ ಮನವಿ ಮಾಡಿದ್ದಾರೆ.