ಕಾರವಾರ: ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಕುಮಟಾದಲ್ಲಿ ಇಂದು ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ಎನ್‍ಎಲ್ ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಸಮರ್ಪಕ ಸೇವೆ ನೀಡಲು ಬಿಎಸ್‍ಎನ್‍ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗೋದಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳುಹಿಸುತ್ತೇವೆ ಎಂದರು.
ಎಲ್ಲ ಸೌಕರ್ಯಗಳಿದ್ದರೂ ಸಂಸ್ಥೆಯ ನೌಕರರು ಕೆಲಸ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ ಎಂದಿದ್ದಾರೆ. ಬಿಎಸ್‍ಎನ್‍ಎಲ್ ಎಂಬ ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ಅಧೀನದಲ್ಲಿರುವ ಬಿಎಸ್‍ಎನ್‍ಎಲ್ ಸಂಸ್ಥೆ ವಿರುದ್ಧ ಹರಿಹಾಯ್ದರು.
ಕಾರ್ಯ ವೈಖರಿ ವಿರುದ್ಧ ಅಸಮದಾನ
ಕಳೆದ ತಿಂಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ಹಾಗೂ ಪಂಚಾಯಿತಿಗಳಿಗೆ ಇಂಟರ್‍ನೆಟ್ ಸೇವೆ ನೀಡದೇ ನೀಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ಸಭೆಯಲ್ಲೇ ಪ್ರತಿಭಟನೆಗೆ ಕುಳಿತು, ಒಂದು ವಾರದ ವರೆಗೆ ಸಮಯ ನೀಡಿ ತೆರಳಿದ್ದರು. ಆದರೆ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳನ್ನು ಮಾಡದೇ ನುಣಚಿಕೊಂಡಿದ್ದರು. ಹೀಗಾಗಿ ಮತ್ತೆ ಸಭೆ ಕರೆದು ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇಂದು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿವಾದಿತ ಹೇಳಿಕೆ ನೀಡಿದ್ದಾರೆ.