ಚಿಕ್ಕೋಡಿ – ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಚಿಕ್ಕೋಡಿಯಲ್ಲೂ ಕೊರೋನಾ ಟೆಸ್ಟಿಂಗ್ ಲ್ಯಾಬ್ ಅಗತ್ಯವಾಗಿದ್ದು, ತಕ್ಷಣ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಗಣೇಶ ಹುಕ್ಕೇರಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಜೊತೆ ಮಾತನಾಡಿದ್ದೇನೆ. ಇಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದಷ್ಟು ಬೇಗ ಲ್ಯಾಬ್ ಆರಂಭಿಸಬೇಕು ಎಂದರು.
ಚಿಕ್ಕೋಡಿ ವ್ಯಾಪ್ತಿಯ ಕುಡಚಿಯಲ್ಲಿ ಅತ್ಯಂತ ಹೆಚ್ಚು ಕೊರೋನಾ ಸೋಂಕು ಕಂಡು ಬಂದಿದೆ. ಅಲ್ಲಿಯ ಜನರನ್ನು ಅಥವಾ ಬೇರೆ ಭಾಗದ ಜನರಲ್ಲಿ ಸಂಶಯ ಕಂಡು ಬಂದರೆ ಅವರನ್ನು ಪ್ರತಿಯೊಬ್ಬರಿಗೆ ಪ್ರತ್ಯೇಕ ಅಂಬುಲೆನ್ಸ್ ಮಾಡಿ ಬೆಳಗಾವಿಗೆ ಕರೆದುಕೊಂಡು ಬರುವುದು ಕಷ್ಟ. ಇದು ವೆಚ್ಚದಾಯಕವಷ್ಟೆ ಅಲ್ಲ, ಅಪಾಯಕಾರಿ ಕೂಡ. ಹಾಗೆ ಕರೆದುಕೊಂಡು ಬರುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಚಿಕ್ಕೋಡಿಯಲ್ಲೇ ಒಂದು ಲ್ಯಾಬ್ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಹಿರಿಯ ನಾಗರಿಕರು, ಸಣ್ಣ ಸಣ್ಣ ಮಕ್ಕಳಿದ್ದಾರೆ. ಅವರನ್ನು ಬೆಳಗಾವಿಗೆ ಕರೆತಂದು ಪರೀಕ್ಷಿಸುವುದು ಸಾಧ್ಯವೇ ಇಲ್ಲ. ಇದರಿಂದ ಸಿಬ್ಬಂದಿಗೂ ತಂದರೆ, ಜನರಿಗೂ ತೊಂದರೆ. ಚಿಕ್ಕೋಡಿಯಲ್ಲೇ ಲ್ಯಾಬ್ ಆದರೆ ತಕ್ಷಣ ಪರೀಕ್ಷೆ ನಡೆಸಿ ಅವರನ್ನು ಮನೆಗೆ ಕಳುಹಿಸಬಹುದು. ಕುಡಚಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಂಡು ಬಂದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತಪಾಸಣೆ ನಡೆಯಬೇಕಾಗಿದೆ. ಹಾಗಾಗಿ ಕೂಡಲೇ ಟೆಸ್ಟಿಂಗ್ ಲ್ಯಾಬ್ ಆರಂಭಿಸಬೇಕು ಎಂದು ಗಣೇಶ ಹುಕ್ಕೇರಿ ಹೇಳಿದರು.