ಬೈಲಹೊಂಗಲ: ಕೈಗಾರಿಕೆ ರಫ್ತು ವಲಯ ಕೇಂದ್ರ ಸ್ಥಾಪನೆ ತೀರ ಅಗತ್ಯವಾಗಿದ್ದು, ತಮ್ಮ ಕಿತ್ತೂರು ಮತಕ್ಷೇತ್ರದಲ್ಲಿ ಇದನ್ನು ತೆರೆಯುವಂತೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ರಫ್ತು ಪ್ರಮೋಷನ್ ಸಮಿತಿ ಸಭೆಯ ನಂತರ ಶಾಸಕರ ಕಾರ್ಯಾಲಯದಿಂದ ಈ ಕುರಿತು ಹೇಳಿಕೆ ನೀಡಿರುವ ಶಾಸಕರು ತಮ್ಮ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ 4ರ ಬಳಿ ಇರುವ ಪ್ರದೇಶದಲ್ಲಿ ಕೈಗಾರಿಕಾ ರಫ್ತು ವಲಯ ಸ್ಥಾಪನೆಗೆ ಸ್ಥಳ ಪ್ರಾಶಸ್ತ್ಯವಾಗಿದೆ. ಇಲ್ಲಿ ರಫ್ತು ಕೇಂದ್ರ ಸ್ಥಾಪಿಸಿದರೆ ಅನುಕೂಲತೆಗಳು ಹೆಚ್ಚು ಎಂದು ಶಾಸಕರು ಸಭೆಯ ನಂತರ ತಾವು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುವಕರಿಗೆ ಉದ್ಯೋಗಾವಕಾಶ: ಕೇಂದ್ರ ಸ್ಥಾಪನೆಯಿಂದ ರಫ್ತು ಸಾಮರ್ಥ್ಯದೊಂದಿಗೆ ಹೆಚ್ಚಿನ ಆದಾಯ ಪಡೆಯಲು ಸಾಧ್ಯ.
ಇದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶ ದೊರಕಿಸಿಕೊಡಲು ಸಾಧ್ಯ. ಈ ವಿಷಯ ತಾವು ಸಭೆಯಲ್ಲಿ ಪ್ರಸ್ತಾಪಿಸಿರುವುದಾಗಿ ಹಾಗೂ ಸರ್ಕಾರದ ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಸಲಹೆಯಂತೆ ರಚಿಸಿದ ರಫ್ತು ಪ್ರಮೋಷನ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದಾಗಿ ಶಾಸಕರು ತಿಳಿಸಿದರು.
ಶಾಲೆ ಶತಮಾನೋತ್ಸವಕ್ಕೆ ಕಾಣಿಕೆ : ತಾವು ಕಲಿತ ಶಾಲೆಯಲ್ಲಿ ಕೆಲ ವರ್ಷಗಳ ಹಿಂದೆ ಗುರುವಂದನೆ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈಗ ಇದೇ ಶಾಲೆ ಶತಮಾನೋತ್ಸವಕ್ಕೆ ವಿಶೇಷ ಕಾಣಿಕೆ ನೀಡಲು ಮುಂದಾಗಿದ್ದಾರೆ. ನಗರದ ಶಹಾಪುರದಲ್ಲಿರುವ ಮೀರಾಪುರ ಗಲ್ಲಿಯ ಚಿಂತಾಮಣರಾವ್ ಶಾಲೆಯಲ್ಲಿ ಅಭಯ ಪಾಟೀಲ ಕಲಿತಿದ್ದು ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆ ಅಭಿವೃದ್ಧಿಗೆ ಎರಡೂವರೆ ಕೋಟಿ ರೂ. ಅನುದಾನ ವೆಚ್ಚ ಮಾಡಿದ್ದಾರೆ. ಇದೇ ವರ್ಷ ನಡೆಯಲಿರುವ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ಅಭಯ ಪಾಟೀಲ ನಿರ್ಧರಿಸಿದ್ದಾರೆ. ಶುಕ್ರವಾರ ಶಾಲೆಗೆ ಭೇಟಿ ನೀಡಿದ ಶಾಸಕರು ಶತಮಾನೋತ್ಸವ ಆಚರಣೆ ಕುರಿತು ಶಿಕ್ಷಕರ ಜೊತೆ ಚರ್ಚೆ ನಡೆಸಿದರಲ್ಲದೆ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶಾಲೆ ಸಭಾಗೃಹದ ಅಭಿವೃದ್ಧಿಗೆ ಚಾಲನೆ ನೀಡಿದರು.