ಹಾಸನ: ಕೊರೊನಾ ವೈರಸ್ ಜಿಲ್ಲೆಯ ಕಲ್ಯಾಣ ಮಂಟಪದ ಮಾಲೀಕರನ್ನು ಅತಂತ್ರ ಸ್ಥಿತಿಗೆ ದೂಡಿದೆ. ಹಾಸನ ನಗರದಲ್ಲೇ ಕಲ್ಯಾಣ ಮಂಟಪ ಮಾಲೀಕರಿಗೆ ಬರೋಬ್ಬರಿ 50 ರಿಂದ 60 ಕೋಟಿ ನಷ್ಟ ಆಗಿದೆ ಎಂದು ಹಾಸನ ಕಲ್ಯಾಣ ಮಂಟಪದ ಅಧ್ಯಕ್ಷ ದಿನೇಶ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಅವರು, ಕಲ್ಯಾಣ ಮಂಟಪ ಮಾಲೀಕರು ಈಗಾಗಲೇ ಮದುವೆಗೆ ಬುಕ್ ಮಾಡಿದವರ ಹಣ ವಾಪಸ್ ಕೊಡಲು ಅಸಾಹಯಕತೆ ತೋಡಿಕೊಂಡಿದ್ದಾರೆ. ಈ ಕುರಿತು ಹಾಸನ ಡಿಸಿ ಸಮ್ಮುಖದಲ್ಲಿ ಸಭೆ ನಡೆದಿದೆ. 40 ಸಾವಿರ ಹಣ ಕಟ್ಟಿದವರ ಹಣದಲ್ಲಿ 20% ಕಡಿತ ಹಾಗೂ 40 ಸಾವಿರ ಮೇಲೆ ಹಣ ಕಟ್ಟಿದವರಿಗೆ 30% ಹಣ ಕಡಿತ ಮಾಡಿ ವಾಪಸ್ ನೀಡಲು ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ದಿನೇಶ್ ತಿಳಿಸಿದ್ದಾರೆ.
ಸದ್ಯ ಕೊರೊನಾ ಅಟ್ಟಹಾಸ ಕಲ್ಯಾಣ ಮಂಟಪ ಮಾಲೀಕರನ್ನು ಪಾತಾಳಕ್ಕೆ ದೂಡಿದೆ. ಆದರೆ ಇತ್ತ ಕಲ್ಯಾಣ ಮಂಟಪಕ್ಕೆ ಅಡ್ವಾನ್ಸ್ ಹಣ ಕಟ್ಟಿರುವವರು ನಾವೂ ಕೂಡ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ನಮ್ಮ ಸಂಪೂರ್ಣ ಹಣ ವಾಪಸ್ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಸುಮಾರು 50ಕ್ಕೂ ಅಧಿಕ ಕಲ್ಯಾಣ ಮಂಟಪ ಇದೆ. ಇದರಿಂದ ಸುಮಾರು 50 ರಿಂದ 60 ಕೋಟಿಯಷ್ಟು ನಷ್ಟವಾಗಿದೆ ಎಂದು ದಿನೇಶ್ ಹೇಳಿದರು.