ಗೋಕಾಕ: ಇಲ್ಲಿ ಮೇ 6ರಂದು ನಡೆದಿದ್ದ ಯುವ ಮುಖಂಡ, ಆದಿಜಾಂಬವ ನಗರ ಬಡಾವಣೆಯ ನಿವಾಸಿ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳು ಮತ್ತು ಅವರ ಸಹಚರರ ಮನೆಗಳ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, ₹ 30.48 ಲಕ್ಷ ನಗದು, ಮಾರಕಾಸ್ತ್ರ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು.
‘ಇಲ್ಲಿನ ಮರಾಠಾ ಗಲ್ಲಿ ನಿವಾಸಿ ಗಂಗಾಧರ ಸಂತ್ರಾಮ ಶಿಂಧೆ, ಕೇದಾರಿ ಬಸವಣ್ಣಿ ಜಾಧವ ಮತ್ತು ಸಂತೋಷ ಪಾಂಡುರಂಗ ಚಿಗಡೊಳ್ಳಿ, ಮೊಕಾಶಿ ಗಲ್ಲಿಯ ವಿನಾಯಕ ಬಸವರಾಜ ಹಡಗಿನಾಳ ಮತ್ತು ವಿಠ್ಠಲ ಪರಶುರಾಮ ಪವಾರ, ಸೋಮವಾರ ಪೇಟೆಯ ವಿನೋದ ಚಂದ್ರು ಹೊಸಮನಿ, ಅಂಬಗೇರ ಗಲ್ಲಿಯ ಕಿರಣ ವಿಜಯ ದೊಡ್ಡನ್ನವರ, ಸಿದ್ದೇಶ್ವರ ನಗರದ ರವಿ ಭೀಮಶಿ ಚೂನನ್ನವರ ಹಾಗೂ ಬಸವನಗರ ಬಡಾವಣೆಯ ಸುನೀಲ ಮಲ್ಲಿಕಾರ್ಜುನ ಮುರಕಿಭಾವಿ ಎನ್ನುವವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ತಿಳಿಸಿದರು.
‘ಈ ಆರೋಪಿಗಳು 2006ರಿಂದ ‘ಟೈಗರ್ ಗ್ಯಾಂಗ್’ ಎನ್ನುವ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಹಣ ಗಳಿಸುವ ಹಾಗೂ ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಸಲುವಾಗಿ ಸಂಘಟಿತರಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದುದುದು ಗೊತ್ತಾಗಿದೆ. ಕೊಲೆ, ಕೊಲೆಗೆ ಯತ್ನ, ಡಕಾಯಿತಿ ಹಾಗೂ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದರು. ಇದಕ್ಕಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಯುವಕರ ಮೇಲೆ ಪ್ರಭಾವ ಬೀರಿ ತಮ್ಮ ಸಂಘಟನೆಯ ಸದಸ್ಯರನ್ನಾಗಿ ಮಾಡಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ’ ಎಂದು ವಿವರಿಸಿದರು.
‘ಸಾಕ್ಷಿದಾರರನ್ನು ಹೆದರಿಸಿ, ಹಣದ ಆಮಿಷವೊಡ್ಡಿ ಪುರಾವೆಗಳನ್ನು ನಾಶಪಡಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಹೀಗಾಗಿ, ಅವರ ಆರೋಪಿಗಳ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ-2000 (ಕೆಸಿಒಸಿಎ) ಕಲಂ 3 ಮತ್ತು 4ನ್ನು ಅಳವಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
‘ದಾಳಿ ವೇಳೆ, ಒಂದು ಪಿಸ್ತೂಲ್, 20 ಜೀವಂತ ಗುಂಡುಗಳು, 4 ತಲ್ವಾರ್‌ಗಳು, ಮೂರು ಜಂಬೆ, 22 ಮೊಬೈಲ್ ಫೋನ್‌ಗಳು, 4 ಸಿಮ್ ಕಾರ್ಡ್‌ಗಳು, 11 ಬ್ಯಾಂಕ್ ಪಾಸ್ ಪುಸ್ತಕಗಳು, ತಲಾ 12 ಅಸಲಿ ಹಾಗೂ ನಕಲಿ ಆಸ್ತಿ ದಾಖಲಾತಿಗಳು, 1 ಪಾನ್ ಕಾರ್ಡ್, 1 ಆಧಾರ್ ಕಾರ್ಡ್, 1 ಮತದಾರರ ಗುರುತಿನ, 4 ಖಾಲಿ ಚೆಕ್‌ಗಳು, 1 ಬಾಂಡ್ ಪೇಪರ್, 2 ಎಟಿಎಂ ಕಾರ್ಡ್‌ಗಳು ಹಾಗೂ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ 3 ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.