ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭದ್ರತೆಯನ್ನು ಕಡಿಮೆ ಮಾಡಿದ್ದ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ದೆಹಲಿಯ ಲೋಧಿ ರೋಡ್‍ನಲ್ಲಿ ಪ್ರಿಯಾಂಕಾ ವಾಸ ಮಾಡುತ್ತಿರುವ ನಂ.35 ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಿಯಾಂಕಾ ಗಾಂಧಿ ಅವರಿಗೆ ಜುಲೈ 1ರಂದು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಎಸ್‍ಪಿಜಿ ಭದ್ರತೆ ಇಲ್ಲದ ಕಾರಣ ಮನೆ ಖಾಲಿ ಮಾಡುವಂತೆ ಪತ್ರದಲ್ಲಿ ಸೂಚಿಸಿದೆ. ಆಗಸ್ಟ್ 1ರ ವೇಳೆಗೆ ಬಂಗಲೆಯನ್ನು ಖಾಲಿ ಮಾಡಲು ಹೇಳಿದ್ದು, ಅದಕ್ಕೂ ಮುನ್ನವೇ ನಿವಾಸಕ್ಕೆ ಸಂಬಂಧಿಸಿದ ಬಿಲ್‍ಗಳನ್ನು ಪಾವತಿ ಮಾಡಲು ಹೇಳಿದೆ.
2020ರ ಜೂನ್ 30ರ ವೇಳೆಗೆ ಪ್ರಿಯಾಂಕಾ ಗಾಂಧಿ 3.46,677 ರೂ. ಮೊತ್ತದ ಬಾಕಿ ಬಿಲ್‍ಗಳನ್ನು ಪಾವತಿ ಮಾಡಬೇಕಿದೆ. ಸೂಚಿಸಿದ ಅವಧಿ ವೇಳೆಗೆ ನಿವಾಸ ಖಾಲಿ ಮಾಡದಿದ್ದರೆ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ಎಸ್‍ಪಿಜಿ ಭದ್ರತೆಯಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕೈಬಿಟ್ಟ ಬಳಿಕ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಸದ್ಯ ಪ್ರಿಯಾಂಕಾ ಗಾಂಧಿ ಅವರಿಗೆ ಜಡ್ ಪ್ಲಸ್ ಭದ್ರತೆಯನ್ನು ನೀಡಲಾಗುತ್ತಿದೆ. ನಿವಾಸ ಖಾಲಿ ಮಾಡಲು ಸೂಚಿಸುತ್ತಿದಂತೆ ಅಗತ್ಯ ಬಿಲ್ ಬಾಕಿ ಪಾವತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಆನ್‍ಲೈನ್ ಪಾವತಿಯನ್ನು ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದಹಾಗೇ 1977ರಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಈ ನಿವಾಸವನ್ನು ಹಂಚಿಕೆ ಮಾಡಲಾಗಿತ್ತು.
ಕಾಂಗ್ರೆಸ್ ಮುಖಂಡರ ಆಪ್ತ ಮೂಲಗಳ ಮಾಹಿತಿ ಅನ್ವಯ ಪ್ರಿಯಾಂಕಾ ಗಾಂಧಿ ಮೊದಲು ಸರ್ಕಾರಿ ಬಂಗಲೆಯನ್ನು ತೆಗೆದುಕೊಳ್ಳಲು ಹಿಂಜರಿದ್ದರು. ಆದರೆ ಎಸ್‍ಪಿಜಿ ಭದ್ರತೆಯ ಕಾರಣ ಅವರಿಗೆ ನಿವಾಸ ಹಂಚಿಕೆ ಮಾಡಲಾಗಿತ್ತು. ಮದುವೆಯಾದ ಬಳಿಕವೂ ಅವರನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ದೆಹಲಿಯಲ್ಲಿರುವ ಸೈನಿಕ್ ಫಾರ್ಮ್ ಹೌಸ್‍ಗೆ ತೆರಳಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಎಲೈಟ್ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಎಸ್‍ಪಿಜಿ ಭದ್ರತೆಯನ್ನು ವಾಪಸ್ ಪಡೆದಿತ್ತು. ಈ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರದ ಕ್ರಮದ ಕುರಿತು ವ್ಯಾಪಕ ಟೀಕೆ ಮಾಡಿದ್ದರು.