ನವದೆಹಲಿ: ಕೊರೊನಾ ಸೋಂಕು ಹಬ್ಬುತ್ತಿರುವ ವೇಗಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದೆ. ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದೆಂದು ಡಿಸಿಎಂ ಮನೀಶ್ ಸಿಸೋಡಿಯಾ ಭವಿಷ್ಯ ನುಡಿದಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಸೃಷ್ಟಿಯಾಗಿದ್ದು, ಈ ಹಿನ್ನೆಲೆ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯಂದ್ರ ಜೈನ್ ಹಾಗೂ ದೆಹಲಿ ತುರ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಗೂ ಬಳಿಕ ಮಾತನಾಡಿದ ಮನೀಶ್ ಸಿಸೋಡಿಯಾ, ಜೂನ್ 15ರ ವೇಳೆಗೆ ದೆಹಲಿಯಲ್ಲಿ 44 ಸಾವಿರ ಸೋಂಕು ಪತ್ತೆಯಾಗಲಿದ್ದು, 6,600 ಬೆಡ್‍ಗಳ ಅವಶ್ಯಕತೆ ಇದೆ. ಜೂನ್ 30ಕ್ಕೆ ಒಂದು ಲಕ್ಷದ ಗಡಿ ಸೋಂಕಿತರ ಸಂಖ್ಯೆ ದಾಟಲಿದ್ದು, ಕನಿಷ್ಠ ಹದಿನೈದು ಸಾವಿರ ಬೆಡ್‍ಗಳ ಅವಶ್ಯಕತೆ ಇದೆ ಎಂದರು.
ಜುಲೈ ನಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಲಿದ್ದು, ಜುಲೈ 15ಕ್ಕೆ 2.25 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ 33,000 ಬೆಡ್‍ಗಳ ಅವಶ್ಯಕತೆ ಇದೆ. ಜುಲೈ ಅಂತ್ಯಕ್ಕೆ ದೆಹಲಿವೊಂದರಲ್ಲೇ 5.5 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ. ಹೀಗಾಗಿ ದೆಹಲಿಯಲ್ಲಿ 80 ಸಾವಿರ ಬೆಡ್‍ಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹಬ್ಬುತ್ತಿದ್ದು, ಪ್ರತಿ 12-13 ದಿನಗಳಿಗೆ ದುಪ್ಪಟ್ಟಾಗುತ್ತಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿದೆ. ಆದರೆ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದರು.
ಸಭೆಯಲ್ಲಿ ದೆಹಲಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡುತ್ತಿರುವ ಬಗ್ಗೆ, ಸರ್ಕಾರ ತೆಗೆದುಕೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಆಸ್ಪತ್ರೆ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಾಯಿತು.