ಬೆಂಗಳೂರು: ನಗರದ ಅತಿ ದೊಡ್ಡ ಖಾಸಗಿ ಆಸ್ಪತ್ರೆಗೆ ಬೀಗ ಬೀಳುವ ಭೀತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು, ಈ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.
ನಗರದ ಬಿಳೆಕಲ್ಲಹಳ್ಳಿ ವಾರ್ಡಿನ ಕೋಡಿಚಿಕ್ಕನಹಳ್ಳಿಯ ನಿವಾಸಿಯಾಗಿದ್ದ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ 10 ದಿನಗಳಿಂದ ಶೀತ, ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಆದರೆ ಇದಕ್ಕೂ ಮುನ್ನ ಮಹಿಳೆ ನಗರದ ಮೂರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ನಗರದ ಬನ್ನೇರುಘಟ್ಟ, ಜಯನಗರ ಮತ್ತು ಮೈಕೋ ಲೇ ಔಟ್‍ನ ಪ್ರಮುಖ ಮೂರು ಖಾಸಗಿ ಆಸ್ಪತ್ರೆಗೆಗಳಿಗೆ ಕೊರೊನಾ ಸೋಂಕಿತೆ ಭೇಟಿ ನೀಡಿದ್ದರು. ಸದ್ಯ ಕೊರೊನಾ ಪಾಸಿಟಿವ್ ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಬೀಗ ಜಡಿಯುವುದಕ್ಕೆ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ನಗರದ ಕೇಸ್ ನಂ.565ರ ಈಕೆ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಆ ಬಳಿಕ ಜಯನಗರ ಖಾಸಗಿ ಆಸ್ಪತ್ರೆ ಸೋಂಕಿತೆಯ ಸ್ವಾಬ್ ಟೆಸ್ಟ್ ನಡೆಸಿತ್ತು. ಆದರೆ ಸೋಂಕು ಇರುವುದು ಖಚಿತವಾಗಿದ್ದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಮ್ಮ ಮನೆ ಡಾಕ್ಟರ್ ಇದ್ದು, ಅವರ ಬಳಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಂದ ತೆರಳಿದ್ದಾರೆ.
ಇತ್ತ ಜಯನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಕೂಡ ಈಕೆಗೆ ಕೊರೊನಾ ಲಕ್ಷಣಗಳು ಕಂಡು ಬಂದರು ಸ್ಯಾಂಪಲ್ ತೆಗೆದುಕೊಂಡು ಮನೆಗೆ ಕಳಿಸಿದ್ದಾರೆ. ಈ ವೇಳೆ ಆಕೆಯನ್ನು ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆ ವೇಳೆ ವಿಕ್ಟೋರಿಯಾದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಖಚಿತವಾಗಿತ್ತು. ಕೊರೊನಾ ಪಾಸಿಟಿವ್ ವರದಿ ಖಚಿತವಾದ ಹಿನ್ನೆಲೆಯಲ್ಲಿ ವೃದ್ಧೆಯ ಎಲ್ಲಿ ಹೋಗಿದ್ರು? ಹೇಗೆ ಬಂತು? ಇತ್ಯಾದಿ ಮಾಹಿತಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.