ಬೆಂಗಳೂರು: ಕೊರೊನಾ ಸೋಂಕಿತನೊಬ್ಬ ತುರ್ತು ನಿರ್ಗಮನದ ಕಿಟಕಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.
50 ವರ್ಷದ 466ನೇ ಕೊರೊನಾ ಸೋಂಕಿತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಉಸಿರಾಟದ ತೊಂದಾರೆಯಿಂದ ಬಳಲುತ್ತಿದ್ದರಲ್ಲದೇ ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ವೈಫಲ್ಯ ಸಮಸ್ಯೆಯಿಂದಲೂ ಬಳುತ್ತಿದ್ದರು. ಅವರನ್ನು ಡಯಾಲಿಸಿಸ್ ಗೆ ಒಳಪಡಿಸಲಾಗಿತ್ತು. ಇತ್ತೀಚೆಗೆ ಇವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ನಿನ್ನೆ ಕೂಡ ಸೋಂಕಿತ ವ್ಯಕ್ತಿ ಡಯಾಲಿಸಿಸ್ ಮಾಡಿಸಿಕೊಂಡಿದ್ದ. ಇಂದು ಬೆಳಿಗ್ಗೆ ತಿಂಡಿಗೆ ಇಡ್ಲಿ ಬೇಕೆಂದು ಕೇಳಿ ಒಂದು ಪ್ಲೇಟ್ ಇಡ್ಲಿ ತಿಂದಿದ್ದ. ಬಳಿಕ ಮತ್ತೆ ಒಂದು ಪ್ಲೇಟ್ ಇಡ್ಲಿ ಬೇಕೆಂದು ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದ. ಸಿಬ್ಬಂದಿ ಇಡ್ಲಿ ತರಲೆಂದು ಹೋಗಿ ಬರುವಷ್ಟರಲ್ಲಿ ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊರೊನಾ ಸೋಂಕಿತ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಇದೀಗ ಸಿಬ್ಬಂದಿಗಳ ನಿರ್ಲಕ್ಷ್ಯವಿರಬಹುದೇ ಎಂಬ ಸಂಶಯ ಕೂಡ ಆರಂಭವಾಗಿದೆ. ಸೋಂಕಿತ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭೇಟಿ ನೀಡಿ, ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ನಡುವೆ ಕೊರೊನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಆತನ ಮನೆಯವರನ್ನೂ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
Laxmi News 24×7