ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನ ವಿರುದ್ಧ ದಿನದಿಂದ ದಿನಕ್ಕೆ ಅಸಮಾಧಾನ ಹೆಚ್ಚುತ್ತಿದೆ. ಇದುವರೆಗೂ ದಿ. ಶಾಸಕ ಎಚ್.ವೈ.ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸಿದ್ದರಾಮಯ್ಯ ಆಪ್ತನ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ಡೀಲ್ ಮಾಸ್ಟರ್ ಪಟ್ಟಗಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೊರಗಿನವರ ಹಸ್ತಕ್ಷೇಪ ಬೇಡ:
ಕಳೆದ ಮೂರ್ನಾಲ್ಕು ತಿಂಗಳಿನಿಂದ ಕ್ಷೇತ್ರದ ವಿಷಯದಲ್ಲಿ ಹೊರಗಿನ ವ್ಯಕ್ತಿಯ ಹಸ್ತಕ್ಷೇಪ ಬೇಡ ಎನ್ನುವ ವಾದವನ್ನು ಮಹಾದೇವಿ ಮೇಟಿ ಅವರು ಮಂಡಿಸುತ್ತ ಬಂದಿದ್ದರೂ ಬಹುತೇಕ ಕಾಂಗ್ರೆಸ್ ಮುಖಂಡರು ಅವರ
ಮಾತಿಗೆ ಕ್ಯಾರೆ ಅಂದಂತೆ ಕಾಣಿಸುತ್ತಿಲ್ಲ. ಇದರಿಂದ ರೋಷ ಹೋಗಿರುವ ಮಹಾದೇವಿ ಮೇಟಿ ಅವರು ಮಾ.20 ರಂದು ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಮಹಾದೇವಿ ಮೇಟಿ ಅವರ ಈ ನಿರ್ಧಾರ ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಸವಾಲು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸ್ವಾಭಿಮಾನದ ಮಾತು:
ದಿ. ಎಚ್.ವೈ. ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ವಿರುದ್ಧ ಎಷ್ಟೆಲ್ಲ ವಾಗ್ದಾಳಿ ನಡೆಸಿದರೂ ಅದನ್ನು ಕಾಂಗ್ರೆಸ್ಸಗರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ವಿರುದ್ಧ ವಾಗ್ದಾಳಿ ನಡೆಸಿ, ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ಸಿಗರ ಸ್ವಾಭಿಮಾನ ಕೆಣಕಿದ್ದಾರೆ.
ವಾರಸುದಾರರು ಯಾರು ?:
2023 ರಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ಕಳೆದ ಮೂರು ವರ್ಷಗಳಿಂದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾರಾದರೂ ವಾರಸುದಾರರು ಇದ್ದಾರೋ ಇಲ್ಲವೋ ಎಂದು ಪ್ರಶ್ನಿಸಿರುವ ಅವರು ಕ್ಷೇತ್ರವನ್ನು ಯಾರು ಮುನ್ನಡೆಸುತ್ತಿದ್ದಾರೆ. ಶಾಸಕರು ಇದ್ದಾಗಲೂ, ಈಗ ಇಲ್ಲದಿರುವಾಗಲೂ ಒಂದೇ ಸ್ಥಿತಿ ಇದೆ. ಹೀಗಾದರೆ ಕ್ಷೇತ್ರದ ಗತಿ ಏನು ಎಂದು ಅವರು ಪ್ರಶ್ನಿಸಿರುವುದು ಚುನಾವಣೆ ಈ ಹೊತ್ತಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರಕ್ಕೆ ಸಂಬಂಧಿಸಿದವರಲ್ಲದ, ಚುನಾಯಿತ ಪ್ರತಿನಿಧಿಯೂ ಅಲ್ಲದ ವ್ಯಕ್ತಿಯ ಕಾಣದ ಕೈ ಸರ್ಕಾರದ ಮಟ್ಟದಲ್ಲಿ ಇಷ್ಟೊಂದು ಪ್ರಭಾವಶಾಲಿಯೇ ಎನ್ನುವ ಅಚ್ಚರಿ ವ್ಯಕ್ತ ಪಡಿಸಿರುವ ಚರಂತಿಮಠರು,ಇಲ್ಲಿನ ಕಾಂಗ್ರೆಸ್ ಮುಖಂಡರುಗಳಿಗೆ ಸ್ವಾಭಿಮಾನ ಇದೆಯೋ ಇಲ್ಲವೋ ಎನ್ನುವ ಸಂಶಯ ಕಾಡುತ್ತಿದೆ ಎಂದು ಹೇಳುವ ಮೂಲಕ ಕ್ಷೇತ್ರದ ಕಾಂಗ್ರೆಸ್ಸಿಗರ ಸ್ವಾಭಿಮಾನ ಕೆಣಕಿದ್ದಾರೆ.
ಡೀಲ್ ಮಾಸ್ಟರ್:
ಇಷ್ಟಕ್ಕೆ ಸುಮ್ಮನಾಗದ ಅವರು ಕ್ಷೇತ್ರದವರಲ್ಲ, ಈ ಊರಿನವರಲ್ಲ, ಬಾದಾಮಿ ಕ್ಷೇತ್ರಕ್ಕೆ ಸೀಮಿತ ಆಗಿ, ಅಲ್ಲಿಂದ ವರಣಾ ಕ್ಷೇತ್ರಕ್ಕೆ ಹೋಗಿ, ಈಗ ಅಲ್ಲಿಗೆ ಬಂದಿದ್ದಾರೆ. ಕ್ಷೇತ್ರದಲ್ಲಿ ಏನು ನಡೆದಿದೆ. ಈ ಅಂದಾದುಂದಿ ಕಾಂಗ್ರೆಸಿಗರಿಗೆ ತಿಳಿಯುತ್ತಿದೆಯೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ಜನಪ್ರತಿಧಿ ಅಲ್ಲದ ಒಬ್ಬ ವ್ಯಕ್ತಿ ಒಂದು ಲೆಟರ್ ಕೊಟ್ಟ ಕೂಡಲೇ ಮುಖ್ಯಮಂತ್ರಿಗಳು ಅದೇ ಮನವಿ ಪತ್ರದ ಮೇಲೆ, ಯಾವುದೇ ಪ್ರೊಸಿಜೇರ್ ಗಮನಿಸದೇ 80 ಲಕ್ಷ ರೂ.ಗಳ ಮಂಜೂರಾತಿಗೆ ನೋಟ ಬರೆಯುತ್ತಾರೆ. ಇಂತಹ ಡೀಲ್‌ಮಾಸ್ಟರ್ ಗಳನ್ನು ಕ್ಷೇತ್ರದ ಜನತೆ ದೂರವಿಡುವ ಸಮಯ ಹತ್ತಿರವಾಗಿದೆ ಎನ್ನುವ ಭವಿಷ್ಯ ನುಡಿದ್ದಾರೆ.
ಅಸಮಾಧಾನ ಸ್ಪೋಟ:
ಯಾರೋ ಒಬ್ಬಿಬ್ಬರು ಮುಖ್ಯಮಂತ್ರಿಗಳ ಆಪ್ತನ ವಿರುದ್ಧ ದೂರಿದಲ್ಲಿ ಏನೂ ಆಗದು ಎನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲೂ ಅಸಮಾಧಾನದ ಮಾತಿಗಳು ಕೇಳಿಬರುತ್ತಿವೆ. ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆಪ್ತನನ್ನು ವ್ಯವಸ್ಥಿತವಾಗಿ ಹಣಿಯುವ ತಂತ್ರಗಳು ಸದ್ದಿಲ್ಲದೆ ಶುರುವಾಗಿವೆಯಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತನ ವಿರುದ್ಧ ಪಕ್ಷದ ಒಳಗೆ ಮತ್ತು ಹೊರಗೆ ಎಷ್ಟೆಲ್ಲ ಅಸಮಾಧಾನ ಸ್ಪೋಟಗೊಂಡಿದೆ.
ಪಕ್ಷದ ಮೇಲೆ ಪರಿಣಾಮ:
ಚುನಾವಣೆ ಹೊತ್ತಲ್ಲಿ ಇಂತಹ ಬೆಳವಣಿಗೆಗಳು ಸಹಜವಾಗಿದ್ದರೂ, ಈ ರೀತಿಯ ಅಪಸ್ವರದ ಬೆಳವಣಿಗೆಗಳಿಂದ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಲಿವೆ ಎನ್ನುವುದು ಮುಖ್ಯವಾಗಲಿದೆ.
Laxmi News 24×7