ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿರುವ ‘ದಾಖಲೆಯ ಬೆಳವಣಿಗೆ’ ನಡೆದಿದೆ.
ಈ ಶೈಕ್ಷಣಿಕ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಖಾನಾಪುರ, ಸವದತ್ತಿ ಹಾಗೂ ರಾಮದುರ್ಗ ಕ್ಷೇತ್ರಗಳಲ್ಲಿ 1ರಿಂದ 10ನೇ ತರಗತಿವರೆಗೂ ಮಕ್ಕಳು ಖಾಸಗಿಯಿಂದ ಸರ್ಕಾರಿ ಶಾಲೆಗಳತ್ತ ಬಂದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ 954 ಬಾಲಕರು ಮತ್ತು 852 ಬಾಲಕಿಯರು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಪೋಷಕರು ಇಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳತ್ತ ಒಲವು ತೋರಿರುವುದು ಇದೇ ಮೊದಲು ಎಂಬ ಮಾತು ಇಲಾಖೆಯ ಹಿರಿಯ ಅಧಿಕಾರಿಗಳದಾಗಿದೆ.
8ನೇ ತರಗತಿಗೆ ಹೆಚ್ಚು: 8ನೇ ತರಗತಿಗೆ ಅತಿ ಹೆಚ್ಚು ಅಂದರೆ 164 ಬಾಲಕರು ಮತ್ತು 124 ಬಾಲಕಿಯರು ಸೇರಿ 288 ಮಂದಿ ಪ್ರವೇಶ ಪಡೆದಿದ್ದಾರೆ. 5ನೇ ತರಗತಿಗೆ (264), 6ನೇ ತರಗತಿಗೆ (261) ಮಕ್ಕಳು ಪ್ರವೇಶ ಪಡೆದಿದ್ದಾರೆ. ಕ್ಷೇತ್ರಗಳ ಪಟ್ಟಿ ಗಮನಿಸಿದರೆ, ಸವದತ್ತಿಯಲ್ಲಿ ಅತಿ ಹೆಚ್ಚು ಅಂದರೆ 441 ಮಕ್ಕಳು ಸೇರಿದ್ದಾರೆ. ಕಿತ್ತೂರು (407) 2ನೇ ಹಾಗೂ ಬೈಲಹೊಂಗಲ (337) ಸ್ಥಾನ ಗಳಿಸಿದೆ. ಜಿಲ್ಲೆಯಲ್ಲಿ ಕ್ರಮವಾಗಿ 9 ಹಾಗೂ 10ನೇ ತರಗತಿಗೆ ಒಟ್ಟು 147 ಮತ್ತು 93 ವಿದ್ಯಾರ್ಥಿಗಳು ಬಂದಿದ್ದಾರೆ.
‘ಪ್ರಜಾವಾಣಿ’ಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಆನಂದ ಪುಂಡಲೀಕ, ‘ಹಿಂದಿನ ವರ್ಷಗಳಲ್ಲೂ ಖಾಸಗಿ ಶಾಲೆಗಳ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದು ಇರುತ್ತಿತ್ತು. ಆದರೆ, ಈ ಬಾರಿ ಅತಿ ಹೆಚ್ಚಿನ ಪ್ರತಿಕ್ರಿಯೆ ಬಂದಿದೆ. ಪೋಷಕರು ನಮ್ಮ ಶಾಲೆಗಳತ್ತ ಪ್ರೀತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ದಾಖಲಾತಿಗೆ ಈ ತಿಂಗಳ ಕೊನೆವರೆಗೂ ಸಮಯವಿದ್ದು, ಮತ್ತಷ್ಟು ಮಕ್ಕಳು ಸೇರುವ ಸಾಧ್ಯತೆ ಇದೆ. ಎಲ್ಲ ತರಗತಿಗಳಿಗೂ ಮಕ್ಕಳು ಪ್ರವೇಶ ಪಡೆದಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಗುಣಮಟ್ಟ, ಯೋಜನೆಗಳಿಂದ: ‘ಪಠ್ಯಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರ, ಬಿಸಿಯೂಟ, ಕ್ಷೀರ ಭಾಗ್ಯ, ಸೈಕಲ್ ಕೊಡುತ್ತಿರುವುದು ಮೊದಲಾದ ಸರ್ಕಾರದ ಯೋಜನೆಗಳು, ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು, ಅತ್ಯಾಧುನಿಕ ತಂತ್ರಜ್ಞಾನವನನ್ನು ಅಳವಡಿಸಿಕೊಳ್ಳುತ್ತಿರುವುದು ಮೊದಲಾದ ಕಾರಣಗಳಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಮಕ್ಕಳಿರುವ ಕಡೆಗೇ ಹೋಗಿ ನಮ್ಮ ಶಿಕ್ಷಕರು ಪಾಠ ಮಾಡುತ್ತಿರುವ ‘ವಿದ್ಯಾಗಮ’ ಕಾರ್ಯಕ್ರಮವೂ ಆಕರ್ಷಿಸಿದೆ. ಏನೇ ಬೆಳವಣಿಗೆ ಆಗಿದ್ದರೂ ಸರ್ಕಾರಿ ಶಾಲೆಗಳಿಗೆ ವರದಾನವಾಗಿದೆ’ ಎನ್ನುತ್ತಾರೆ ಅವರು.
ಆರ್ಥಿಕ ಸಂಕಷ್ಟವೂ…
‘ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾದ ಲಾಕ್‌ಡೌನ್ ಹಾಗೂ ಈ ಪರಿಣಾಮ ಉಂಟಾದ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿರುವುದು ಕೂಡ ಸರ್ಕಾರಿ ಶಾಲೆಗಳತ್ತ ಬರಲು ಕಾರಣವಾಗಿದೆ. ಕೊರೊನಾ ಭೀತಿ ಇನ್ನೂ ದೂರವಾಗದೇ ಇರುವುದರಿಂದಾಗಿ, ದೂರದ ಶಾಲೆಗಳಿಗೆ ಕಳುಹಿಸಿದರೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎನ್ನುವ ಕಾಳಜಿಯೂ ಇದರಲ್ಲಿದೆ. ಅಲ್ಲದೇ, ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಕಲಿಯಬಹುದು. ಜೊತೆಗೆ ಸೌಲಭ್ಯಗಳೂ ದೊರೆಯುತ್ತವೆ. ಇದೆಲ್ಲವನ್ನೂ ಗಮನಿಸಿ ಪೋಷಕರು ದಾಖಲಾತಿ ಮಾಡಿಸುತ್ತಿದ್ದಾರೆ’ ಎಂದೂ ವಿಶ್ಲೇಷಿಸಲಾಗುತ್ತಿದೆ.
‘ನಗರಗಳಲ್ಲಿ ಕೆಲಸ ಕಳೆದುಕೊಂಡು ಊರುಗಳಿಗೆ ವಾಪಸಾದವರು ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿದ್ದಾರೆ’ ಎನ್ನಲಾಗುತ್ತಿದೆ.
***
ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ದಾಖಲಾದವರ ಸಂಖ್ಯೆ
ಕ್ಷೇತ್ರ; ಬಾಲಕರು; ಬಾಲಕಿಯರು; ಒಟ್ಟು
ಬೈಲಹೊಂಗಲ; 214; 123; 337
ಕಿತ್ತೂರು; 116; 291; 407
ಬೆಳಗಾವಿ ನಗರ; 37; 33; 70
ಬೆಳಗಾವಿ ಗ್ರಾಮೀಣ; 115; 99; 214
ಖಾನಾಪುರ; 142; 112; 254
ಸವದತ್ತಿ; 273; 168; 441
ರಾಮದುರ್ಗ; 57; 26; 83
ಒಟ್ಟು; 954; 852; 1,806